ಸಮಸ್ಯೆ-ಅನುಭವ-ಅನುಭಾವ

ನಮ್ಮ ಭಾರತೀಯ ಸಿನೆಮಾಗಳೇ ಹಾಗೇ, ಹಿನ್ನೆಲೆಯಲ್ಲಿ Theme music ಇಲ್ಲದೆ ನಾಯಕನನ್ನ ತೆರೆಯ ಮೇಲೆ ಪರಿಚಯಸದಿದ್ದಲ್ಲಿ ‘ಇವನ್ಯಾವ ಸೀಮೆ ಹೀರೋ ಗುರೂ’ ಅಂತ ಮೂಗು ಮುರಿಯುವಷ್ಟು ಬೇಡವಾಗಿಬಿಡುತ್ತಾನೆ.  ನಾಯಕನು ಪುಂಡರ ಕೂಟವನ್ನು ಹೊಕ್ಕಾಗ, ದುಷ್ಟರನ್ನು ಸದೆಬಡಿಯುತ್ತಿರುವಾಗ, ಅಪಾಯದ ಸುಳಿಯಲ್ಲಿ ಸಿಲುಕುವಾಗ, ಸುಳಿಯಿಂದ ಹೊರಬರುತ್ತಿರುವಾಗ ಹೀಗೆ ಹಲವಾರು ಸನ್ನಿವೇಶಗಳಲ್ಲಿ ಅದು ಪ್ರೇಕ್ಷಕರನ್ನು ತಕ್ಕ ಮಟ್ಟಿಗೆ ಪ್ರೇರೇಪಿಸಿ ಮುಂಬರುವ ಅಪಾಯದ ಸುಳಿವನ್ನು, ಒಟ್ಟಾಗಿ ಸಮಸ್ಯೆಯ ಮುನ್ಸೂಚನೆಯನ್ನು ಹೀರೋಗಿಂತ ಮೊದಲೇ ಪ್ರೇಕ್ಷಕರಿಗೆ ನೀಡುವ ಸಿನೆಮಾ ತಂತ್ರವದು. ಇವೆಲ್ಲ ಬರೀ ಸಿನೆಮಾದಲ್ಲಿ ಮಾತ್ರ ನಡೆಯೋದು ಅಂತ ಗೊತ್ತಿದ್ರೂ ನಮ್ಮ ನಿಜ ಜೀವನದಲ್ಲೂ ಹೀಗೆ ಸನ್ನಿವೇಶಕ್ಕೆ ತಕ್ಕಂತೆ Background music ಬರ್ತಾ ಇದ್ದಿದ್ರೆ ಚಂದ ಇರ್ತಿತ್ತು ಅಂತ ಬಹಳ ಸಲ ಅನಿಸಿದ್ದುಂಟು.  ನಮಗೆ ಬರೋ ತೊಂದರೆಗಳು, ನಾಳೆಯ ಕೆಲಸದ ಬಗ್ಗೆ ಇಂದೇ ಕೇಳುವ ಮ್ಯಾನೇಜರ್ ಬಗ್ಗೆ, ದೂರದಲ್ಲೆಲ್ಲೋ ಹೊಂಚು ಹಾಕಿ ಕುಳಿತು ಹೆಲ್ಮೆಟ್ ಧರಿಸದ್ದಕ್ಕೆ ದಂಡ ಹಾಕುವ ಪೊಲೀಸ್ ಬಗ್ಗೆ, ನಮ್ಮ ಪಕ್ಕದಲ್ಲೇ ಇದ್ದು ನಮ್ಮ ವಿರುದ್ಧ ಸಂಚು ಮಸೆಯುವವರನ್ನು ಕುರಿತು…ಇತ್ಯಾದಿಯಾಗಿ ಸುಳಿವು ಸಿಕ್ಕಿದ್ದರೆ ಎಷ್ಟೊಂದು ಚೆನ್ನಿತ್ತು!

ಬಹುಶಃ ನಮ್ಮ ಸುತ್ತ ಮುತ್ತಲು ಬೇಕಾದಷ್ಟು  ಸುಳಿವುಗಳು ಇದ್ದರೂ, ಅದನ್ನು ನೋಡುವ, ಕೇಳಿಸಿಕೊಳ್ಳುವ ಮನಸ್ಥಿತಿ ನಮ್ಮಲಿಲ್ಲವೇನೋ! ಯಾವುದೋ ಒಂದು ಅವಘಡದಿಂದ ಪಾರಾಗಿ ಹೊರಬಂದ ಮೇಲೆ ಅಥವಾ ನೋವು ಅನುಭವಿಸಿ ಅದರಿಂದ ಸುಧಾರಿಸಿಕೊಂಡ ಮೇಲೆ ಅಯ್ಯೋ ಆ ಸುಳಿವು ಸಿಕ್ಕಿತ್ತು, ಅದನ್ನು ನಾನು ಗಮನಿಸಲೇ ಇಲ್ಲ ಎಂದು ಕೈ ಕೈ ಹಿಸುಕಿಕೊಂಡಿರುವ ಪ್ರಸಂಗಗಳು ಬಹಳಷ್ಟಿವೆ. ಆದರೆ ಅತಿಯಾಗಿ ಇಂತಹ ಆಘಾತಕಾರಿ ಸಂಗೀತದ ಸುಳಿಯನ್ನು ಹುಡುಕಿಕೊಂಡಾಗಲಿ ಅಥವಾ ಸಮಸ್ಯೆಗಳ ಬಗ್ಗೆ ಆಲೋಚಿಸಿಕೊಂಡಾಗಲೀ, ಅದಕ್ಕೆಲ್ಲಾ ಉತ್ತರವನ್ನೋ ಅಥವಾ ಪರಿಹಾರಗಳನ್ನ ಕಂಡು ಹಿಡಿಯ ಹೋಗವುದೂ ಕೂಡ ಬೇರೊಂದೇ ಸಮಸ್ಯೆಗೆ ಎಡೆ ಮಾಡಿಕೊಡುವುದೇ ಹೆಚ್ಚು. ನೋಡದೇ ಬರುವ ಆಘಾತ, ಗೊತ್ತಿರುವ ಸಮಸ್ಯೆಗಳ ನಡುವೆ ಎಲ್ಲೋ ಒಂದು ದಾರಿ ಮಾಡಿಕೊಂಡು ಉಪಾಯವಾಗಿ ಕೆಲಸ ಸಾಗಿಸುವುದು ದೈನಂದಿನ ಸವಾಲು ಅಷ್ಟೇ, ಇವರೆಡರ ನಡುವೆ ಇರುವ ವ್ಯತ್ಯಾಸ ಚಿಂತೆ ಹಾಗೂ ಚಿಂತನೆಗಳಿರುವಷ್ಟೇ ಸೂಕ್ಷ್ಮವಾದದ್ದು.

ಸಮಸ್ಯೆಗಳಿರದ ಕೆಲಸವಾಗಲೀ ಬದುಕಾಗಲೀ ಯಾವುದಾದರೂ, ಯಾರಿಗಾದರೂ ಇರುವುದುಂಟೇ?  ಸಮಸ್ಯೆಗಳು ಬರುವುದೇ ನಮ್ಮನ್ನು ಸುಧಾರಿಸುವುದಕ್ಕೆ, ಮುಂಬರುವ ಇನ್ನೊಂದ್ಯಾವುದೋ ಸನ್ನಿವೇಶಗಳಿಗೆ ನಮ್ಮನ್ನು ಅನುವು ಮಾಡುವುದಕ್ಕೆ, ಜೀವನದ ಬಗ್ಗೆ ಸದಾ ಎಚ್ಚರವಾಗಿರಲು ಪ್ರೆರೇಪಿಸೋಕೆ.  ದೈಹಿಕ ಪರಿಶ್ರಮದಿಂದ ದೇಹ ಗಟ್ಟಿಯಾಗುವಂತೆ ಮಾನಸಿಕ ಸಂಕಷ್ಟಗಳು ಮನಸ್ಸನ್ನೂ ಅಷ್ಟೇ ಗಟ್ಟಿಗೊಳಿಸುತ್ತವೆ.

ಸಮಸ್ಯೆಗಳ ಬಗ್ಗೆ ಯೋಚಿಸಿ ಒಂದು ಹೆಜ್ಜೆ ಮುಂದೆ ಹೋದರೆ ಸಮಸ್ಯೆಗಳು ಒಂದು ಮಾನಸಿಕ ನೆಲೆಗಟ್ಟೋ ಅಥವಾ ಭೌತಿಕ ಸ್ಥಿತಿಯೋ ಅನ್ನೊ ಗೊಂದಲ ಒಂದೆಡೆಯಾದರೆ, ನಾವೇ  ಹುಟ್ಟಿಹಾಕಿದ ಸಂಕೀರ್ಣ ಪರಿಸ್ಥಿತಿಯನ್ನು ಸಮಸ್ಯೆಗಳು ಎಂದು ಕರೆಯಬೇಕೋ ಅಥವಾ ನಮ್ಮಿಂದ ನಿವಾರಣೆಯಾಗಬಲ್ಲದನ್ನು ಸಮಸ್ಯೆ ಎಂದು ಹೇಗೆ ಕರೆಯುವುದು, ಪ್ರತಿಯೊಂದು ಸಮಸ್ಯೆಗೂ ಪರಿಹಾರವಿದೆಯೇ? ಅಥವಾ ಉತ್ತರವಿಲ್ಲದ್ದನ್ನೂ ಉತ್ತರವಿರುವಂತಹದ್ದನ್ನೂ ಸಮಸ್ಯೆ ಎಂದು ಒಂದೇ ಹೆಸರಿನಿಂದ ಹೇಗೆ ಕರೆಯಲು ಸಾಧ್ಯ? ಹೀಗೆ ಸಮಸ್ಯೆಯನ್ನು ಕುರಿತು ಯೋಚಿಸಿದಷ್ಟೂ ಸಮಸ್ಯೆ-ಉಪಸಮಸ್ಯೆಗಳು ಸೃಷ್ಟಿಯಾಗಿ ಹಲವಾರು ಪ್ರಶ್ನೆಗಳು ತಲೆ ತುಂಬಾ ಹರಿದು ಗೊಬ್ಬರವಾಗಿದೆ.

’ಯೋಚಿಸಿ ಮುಂದೆ ನಡೆ…’, ’ಆಲೋಚಿಸಿ ಕೆಲಸ ಮಾಡು…’ ಎಂದು ಹೇಳುವುದೇನೋ ಸುಲಭ, ಆದರೆ ನಿಜವಾಗಿಯೂ ಅದು ಸಾಧ್ಯವೇ? ಕೆಲವೊಮ್ಮೆ ಹಿಂದಿನ ಅನುಭವಗಳಿಂದ ಕಲಿತ ಪಾಠಗಳು ಸಮಸ್ಯೆಗಳಿಗೆ ತಂತಾನೆ ಉತ್ತರವನ್ನು ಕಂಡುಕೊಳ್ಳಬಲ್ಲವಾದರೂ ಅನುಭವದ ಒಂದೇ ಒಂದು ಸಮಸ್ಯೆ ಎಂದರೆ ಅದು ಕೆಲಸದ ಪೂರ್ವಭಾವಿಯಾಗಿ ಬರದೇ ಕೆಲಸವೆಲ್ಲ ಆದ ಬಳಿಕ ಬರುವಂಥದ್ದು. ಮತ್ತೆ ಅದೇ ರೀತಿಯ ಕೆಲಸ ಮಾಡುವಲ್ಲಿಯವರೆಗೆ ಆ ಅನುಭವ ಕಲಿಸಿದ ಪಾಠದ ಅಗತ್ಯವೇನೂ ಇರಲಾರದು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನೋಡಿದರೆ ಜೀವನವೆನ್ನುವುದು ಬರೀ ನಮ್ಮ ತಪ್ಪಿನಿಂದ ಕಲಿಯುವ ಪಾಠಗಳ ಸಂಗ್ರಹ ಎಂದು ಯಾರೋ ದೊಡ್ಡವರು ಹೇಳಿದ್ದು ನೆನಪಾಗುತ್ತಿದೆ.

ಸಮಸ್ಯೆ ಬಗ್ಗೆ ಯೋಚಿಸ್ತಾ ತಲೆಗೆ ಹುಳ ಬಿಟ್ಟುಕೊಂಡು ಮಾನಸಿಕ ಸಮಸ್ಯೆಗೆ ಒಳಗಾಗೋ ಬದಲು ಬಂದ ಸಮಸ್ಯೆಯನ್ನ ಪರಿಹರಿಸೋದು ಒಳಿತು ಅಂತ ಸಿನೆಮಾ ಸೋಗಿನಿಂದ ಹೊರ ಬಂದಿದ್ದೇನೆ.

Advertisements