ನೆರಳು

ಚಿಮಣಿ ದೀಪದ ಬೆಳಕಿಗೆ
ಬೆರಳುಗಳ ಪರದೆಯನಿಟ್ಟು
ಗೋಡೆಯ ಮೇಲೆ ಕಂಡ
ನಾಯಿ ನವಿಲು ಜಿಂಕೆಗಳ ಬಾಲ್ಯದ ನೆರಳು..

ಭಾನುವಾರದ ನಸು ಸಂಜೆಯಲಿ
ಅಪ್ಪನ ಕೈ ಹಿಡಿದು ನಡೆವಾಗ
ದಾರಿಯುದ್ದಕ್ಕೂ ಜೊತೆಯಾದ
ಭರವಸೆಯ ನೆರಳು..

ಶಾಲೆಯಂಗಳದಿ ಕುಡಿಮೀಸೆಯ ತಿರುವಿ
ಒಳಗೊಳಗೆ ಖುಷಿಪಡುವುದ
ಕಿಟಕಿಯಿಂದ ಕಂಡು
ಪಕ್ಕನೆ ನಕ್ಕವಳ ಮೊದಲೊಲವ ನೆರಳು..

ಕಾಲೇಜಿನ ತರಗತಿಗಳ ತಪ್ಪಿಸಿ
ಕದ್ದು ಸಿನೆಮಾಗಳ ನೋಡುವಾಗ
ಟಾಕೀಸಿನ ಕತ್ತಲಲಿ ನಾ ಕಂಡ
ಕನಸುಗಳ ನೆರಳು..

ವೃತ್ತಿಯನರಸಿ ರಸ್ತೆ ರಸ್ತೆಗಳ ಅಲೆವಾಗ
ಬಿಸಿಲ ಜಳಪಿಗೆ ಮೈ ಮನ ಕುಗ್ಗಿದಾಗ
ಹತಾಶೆಯ ಕಂಬನಿಗೆ ಸಾಕ್ಷಿಯಾಗಿದ್ದು
ರಸ್ತೆ ಬದಿಯ ಮರದ ನೆರಳು..

ಮನದ ಕಗ್ಗತ್ತಲ ಹೆದ್ದಾರಿಯಲಿ
ಈಗೀಗ ತಿಳಿ ಬೆಳಕು ಸ್ಪರ್ಶಿಸಲು,
ಸದ್ದಿಲ್ಲದೇ ಜೊತೆಯಾಗಿದೆ
ಇವೆಲ್ಲ ನೆನಪುಗಳ ನೆರಳು..

ಎಡೆಬಿಡದೆ ಕಾಡಿದೆ, ಕಾಣದ ನೆರಳೊಂದು
ತೋರುತಲಿ ನನ್ನ ನನಗೇ,
ಒಮ್ಮೆ ಹಿರಿದಾಗಿ – ಒಮ್ಮೆ ಕಿರಿದಾಗಿ
ಅದುವೇ, ರೂಪವಿರದ ಅಂತರಾಳದ ತಿರುಳು!!

Advertisements

ಹೇಗಿದ್ದ ಊರು ಹೇಗಾಯಿತು!

ಪ್ರತಿ ವರ್ಷದಂತೆ, ಕಳೆದ ಮಹಾಲಯ ಅಮಾವಾಸ್ಯೆಯ ಹಬ್ಬಕ್ಕೆ ಊರಿಗೆ ಹೋಗಿದ್ದೆವು. ನನಗೆ ಚಿಕ್ಕಂದಿನಿಂದಲೂ ಈ ಹಬ್ಬವೆಂದರೆ ಅದೇನೋ ಉತ್ಸಾಹ. ಕಾರಣ ನಮ್ಮೂರಲ್ಲಿ ಗಣೇಶ ವಿಸರ್ಜನೆ ಮಾಡುವುದು ಮಹಾಲಯ ಆಮಾವಾಸ್ಯೆಯ ಮರುದಿನದಂದು. ಹಳ್ಳಿಯ ಮಟ್ಟಿಗೆ ಬಹಳ ವಿಜೃಂಭಣೆಯಿಂದಲೇ ಎಲ್ಲರೂ ಕುಣಿದು ಕುಪ್ಪಳಿಸಿ ಊರಿನ ಹಿಂದಿದ್ದ ಕೆರೆಯಲ್ಲಿ ಗಣೇಶ ಮೂರ್ತಿಯನ್ನು ಮುಳುಗಿಸುತ್ತಿದ್ದರು. ನಗರವಾಸಿಗಳಾಗಿದ್ದ ನಮಗೆ ಇವೆಲ್ಲಾ ವಿಭಿನ್ನವಾಗಿ, ರೋಚಕವೆನಿಸುತ್ತಿದ್ದವು.

ಅದ್ಯಾಕೋ ಇತ್ತೀಚಿನ ವರ್ಷಗಳಲ್ಲಿ ನಮ್ಮೂರಿನ ಈ ಹಬ್ಬಗಳ ಮೆರುಗೇ ಕಮ್ಮಿಯಾದಂತಿದೆ. ಆಗೆಲ್ಲಾ ಹಬ್ಬಗಳಲ್ಲಿ ನಮ್ಮನೆಯ ತುಂಬಾ ಕಾಲು ಕಾಲಿಗೆ ಸಿಗುವಷ್ಟು ಜನರಿದ್ದರು. ಈಗ ಒಂದು ತೋರಣ ಕಟ್ಟಲಿಕ್ಕೂ, ತೋಟದಿಂದ ನಾಲ್ಕು ಬಾಳೆ ಎಲೆಗಳನ್ನು ಕೊಯ್ದು ತರಲಿಕ್ಕೂ ನಮ್ಮಜ್ಜಿ ಎಲ್ಲರನ್ನೂ ಹಲ್ಲುಗಿಂಜಿ ಬೇಡುತ್ತಿರುತ್ತಾರೆ. ಎಂಬತ್ತರ ಆಸುಪಾಸಲ್ಲಿರೋ ನಮ್ಮ ಅಜ್ಜನಿಗೆ ಹಬ್ಬದ ಬಗ್ಗೆ ಇರೋ ಹುಮ್ಮಸ್ಸಲ್ಲಿ ಅರ್ಧದಷ್ಟೂ ನಮ್ಮನೆಯ Youth iconsಗೆ ಇಲ್ಲ. ಏನೋ ಹಬ್ಬ ಮಾಡಬೇಕಲ್ಲ ಮಾಡಿದರಾಯಿತು ಅನ್ನುವಂತೆ ತಮ್ಮದೇ ಗುಂಗಿನಲ್ಲಿ ಓಡಾಡುತ್ತಿರುತ್ತಾರೆ..

ನಾನು ಊರಿಗೆ ಹೋದಾಗಲೆಲ್ಲಾ ನನ್ನ ಎಲ್ಲ ಬಂಧುಗಳ ಮನೆಗೆ ಹೋಗಿ ಮಾತಾಡಿ ಬರೋ ಅಭ್ಯಾಸ. ಹಾಗೆಯೇ ಊರ ಒಳಗೆ ಒಂದು ಸುತ್ತು ಬರೋಣವೆಂದು ಹೊರಟೆ. ಊರ ತುಂಬೆಲ್ಲ ನನಗೆ ಕಂಡು ಬಂದದ್ದು ಫೋನ್ ಹಿಡಿದು ಅಲ್ಲಲ್ಲಿ ಕುಳಿತಿರೋ ಯುವಕರ ಗುಂಪುಗಳು‌. ಅಯ್ಯೋ ಈ ಮೊಬೈಲ್ ಗ್ರಹಣ ನಮ್ಮ ಹಳ್ಳಿ ಹೈಕ್ಳಿಗೂ ಹಿಡಿಯಿತೇ ಎಂದು ಸಣ್ಣದಾಗಿ ನಗುತ್ತಾ ಹಾಗೆಯೇ ಮುನ್ನಡೆದೆ. ಇಡೀ ಊರು ನೀರವ ಮೌನ ತಾಳಿ ತಪಸ್ಸಿಗೆ ಕುಳಿತಂತಿತ್ತು. ಸಂಬಂಧಿಕರ ಮನೆಯೊಬ್ಬರ ಒಳಗೆ ಹೋದರೆ ಟಿ.ವಿ ಯೊಂದು ಮನೆ ಮಂದಿಯನ್ನೆಲ್ಲ ತನ್ನ ಹಿಡಿತದಲ್ಲಿಟ್ಟಿತ್ತು‌. ಅವರೆಲ್ಲ ನನ್ನನ್ನೊಮ್ಮೆ ನೋಡಿ, ಕುಳಿತುಕೊಳ್ಳುವಂತೆ ಸನ್ನೆ ಮಾಡಿ ಮತ್ತೆ ಟಿವಿಯೊಂದಿಗಿನ ಸಂವಾದ ಮುಂದುವರೆಸಿದಂತಿತ್ತು‌. ಹೇಗಿದ್ದ ಊರು ಹೇಗಾಯಿತು..

ಶಾಲೆಯ ದಿನಗಳಲ್ಲಿ ಬೇಸಿಗೆ ರಜೆ ಬಂತೆಂದರೆ ಸಾಕು ನಮ್ಮೂರಿಗೆ ಓಡುತ್ತಿದ್ದೆವು. ಅಂದಿನ ದಿನಗಳಲ್ಲಿ ಇಡೀ ಊರಿಗೆ ಟಿ.ವಿ ಇದ್ದದ್ದು ನಮ್ಮೂರಿನ ಪಟೇಲರ ಮನೆಯಲಿ ಮಾತ್ರ.. ಅದೂ 15 ಇಂಚಿನ ಕಪ್ಪು ಬಿಳುಪು ಪರದೆಯ ಟಿವಿ. ವಿದ್ಯುತ್ ಪೂರೈಕೆಯಿದ್ದದ್ದು ಸಂಜೆ ಆರರ ಮೇಲೆಯೇ.. ಆಗ ಬರುತ್ತಿದ್ದ ಒಂದೆರಡು ಧಾರಾವಾಹಿಗಳನ್ನೋ , ರಸಮಂಜರಿ ಕಾರ್ಯಕ್ರಮವನ್ನೋ ನೋಡಲಿಕ್ಕೆ ಇಡೀ ಊರಿನ ಬಹುತೇಕ ಜನ ಆರು ಘಂಟೆಯಾಗುವುದರೊಳಗೆ ದನ ಕರುಗಳನ್ನು ದೊಡ್ಡಿಗೆ ಸೇರಿಸಿ, ಆತುರವಾಗಿಯೇ ಎಲ್ಲ ಕೆಲಸಗಳ ಮುಗಿಸಿ ಆ ಮನೆಯಲ್ಲಿ ಎಲ್ಲರೂ ಹಾಜರಾಗುತ್ತಿದ್ದರು. ಆ ಟಿವಿ ಯಜಮಾನನಿಗೋ ಒಂಥರಾ ಗರ್ವ. ನನ್ನ ಅಕ್ಕ ಅಣ್ಣಂದಿರೂ ಸಹ ಸಂಜೆಯಾಗುತ್ತಿದ್ದಂತೆಯೇ ಅಲ್ಲಿಗೆ ಓಡುತ್ತಿದ್ದರು, ಜೊತೆಗೆ ನಮ್ಮನ್ನೂ ಎಳೆದೊಯ್ಯುತ್ತಿದ್ದರು.‌ ಒಂದು ಮಿನಿ ಚಿತ್ರಮಂದಿರದಂತಿರುತ್ತಿತ್ತು ಆ ಮನೆ. ಊರಿನ ಜನರೆಲ್ಲ ಒಂದೆಡೆ ಸೇರಿ, ಅಜ್ಜಿಯಂದಿರು ಎಲೆ ಅಡಿಕೆ ಹಂಚಿಕೊಳ್ಳುತ್ತಾ, ಗಂಡಸರೆಲ್ಲ ಹೊಲದಲ್ಲಿ ಪಟ್ಟ ಕಷ್ಟಗಳನ್ನು ಹೇಳಿಕೊಳ್ಳುತ್ತಾ, ಚಿಕ್ಕ ಮಕ್ಕಳೆಲ್ಲ ಆಟವಾಡುತ್ತಾ ಟಿವಿ ಕಾರ್ಯಕ್ರಮಗಳ ಜೊತೆ ತಮ್ಮ ದಿನವನ್ನು ಕೊನೆಗೊಳಿಸುತ್ತಿದ್ದರು. ಎಲ್ಲರಲೂ ಇದ್ದ ಆ ಮುಗ್ದತೆ, ಆಪ್ತತೆ, ಸ್ನೇಹ ಸಂಬಂಧಗಳ ಧೃಡತೆಗಳು ನಮ್ಮ ನಗರ ಜೀವನದಲ್ಲಿ ನನಗೆ ಕಾಣಸಿಗದಿದ್ದ ಕಾರಣ ಈ ವಿಚಾರಗಳಿಗೆ ನಮ್ಮೂರು ನನಗೆ ಬಹಳ ಆಪ್ತವೆನಿಸ್ತಿತ್ತು..

ತಂತ್ರಙಾನದ ಹಾವಳಿ ನಗರಗಳ ಗಡಿ ದಾಟಿ ಹಳ್ಳಿಗಳಿಗೂ ಕಾಲಿಟ್ಟ ಮೇಲೆ ಕ್ರಮೇಣ ಅಲ್ಲಿನ ಜನತೆ, ಜೀವನ ಶೈಲಿಯೂ ಬದಲಾಗಿಹೋಗಿದೆ. ಅಲ್ಲಿ ಮನೆಗೊಂದು ಟಿ.ವಿ ಇದೆ ಆದರೆ ಮನಬಿಚ್ಚಿ ಮಾತನಾಡುವವರೇ ಇಲ್ಲ. ಮೊಬೈಲ್ ಫೋನ್ ವಿಚಾರ ವಿನಿಮಯಕ್ಕಿಂತ ಹೆಚ್ಚಾಗಿಯೇ ಬಳಕೆಯಾಗ್ತಿದೆ. ಬದಲಾವಣೆಯೇನೋ ಜಗದ ನಿಯಮವೇ.. ಹಳ್ಳಿಗಳ ಅಭಿವೃದ್ಧಿಯ ದೃಷ್ಟಿಯಲ್ಲಿ ಅದು ಒಳ್ಳೆಯದೇ.. ಆದರೆ ಬದಲಾವಣೆ ಜೀವನಶೈಲಿಗಳಿಗಷ್ಟೇ ಸೀಮಿತವಾಗದೇ ಸಂಬಂಧಗಳ ಮೌಲ್ಯದ ತೂಕದಲ್ಲಿ ಅಸಮತೋಲನ ಉಂಟಾಗಿರುವುದಂತೂ ನಿಜವೇ ಸರಿ. ಒಂಟಿಯಾಗಿದ್ದಾಗ ಬೇಸರ ಕಳೆಯಲು ಫೋನ್ ಬಳಸಲು ಶುರು ಮಾಡಿ ಕೊನೆಗೆ ಫೋನ್ ನಿಂದಲೇ ಮನುಷ್ಯ ಸಂಬಂಧಗಳಿಂದ ದೂರಾಗಿ ಒಂಟಿಯಾಗುತ್ತಿದ್ದಾನೆ ಅಲ್ವೇ? ನಗರಗಳಲ್ಲಿ ಈ ಮಾನವೀಯ ಮೌಲ್ಯಗಳಿಗೆ ಬೆಲೆಯೇ ಇಲ್ಲ ಬಿಡಿ.. ಆದರೆ ಹಳ್ಳಿಗಳಲ್ಲೂ ಇದೇ ರೀತಿಯಾದರೆ ಪಟ್ಟಣ-ಗ್ರಾಮಗಳ ನಡುವಿನ ಆ ವೈಚಾರಿಕ ಗೆರೆ ಅಳಿಸಿ ಹೋದಂತೆಯೇ‌.
ತಂತ್ರಙಾನಗಳ ಸರಿಯಾದ ಬಳಕೆಯನ್ನು ಅರಿತು, ಮತ್ತದೇ ಮುಗ್ದತೆ ಮರುಕಳಿಸಿದ ದಿನ ನಮ್ಮೂರಿನ ಹಬ್ಬಗಳಿಗೆ ಮತ್ತದೇ ಮೆರುಗು ಬರಬಹುದೋ ಏನೋ.. ಕಾದು ನೋಡಬೇಕು..

ಕ್ಷಮೆ ಇರಲಿ !

“Sorry, ದಯವಿಟ್ಟು ಕ್ಷಮಿಸಿ.. “, ಇವು ನಾವು ಯಾರನ್ನೋ ಗೊತ್ತಿಲ್ಲದೇ ತುಳಿದಾಗಲೋ, ಅಚಾನಕ್ಕಾಗಿ ತಪ್ಪಾದಾಗಲೋ, ಸ್ವಾಭಾವಿಕವಾಗಿ ಬರುವ ಪದ ಪ್ರಯೋಗಗಳು. ಹೀಗೆ ಸಣ್ಣ ಪುಟ್ಟ ತಪ್ಪುಗಳಿಗೆ ಕ್ಷಮೆ ಕೇಳೋರು ಒಂದೆಡೆಯಾದರೆ, ವಾಸ್ತವದಲ್ಲಿ ದೊಡ್ಡ ತಪ್ಪು ಮಾಡಿ, ಅದರ ತೀವ್ರತೆ ಇನ್ನೊಬ್ಬರಿಗೆ ಮಾನಸಿಕ ಘಾಸಿಯೆಂದು ಅರಿತಿದ್ದರೂ ಕ್ಷಮೆಯಾಚದೆ ಅವರ ನ್ಯೂನತೆಯನ್ನು ಎತ್ತಿ ಹಿಡಿಯೋರು ಇನ್ನೊಂದೆಡೆ.

“ಕ್ಷಮೆ ಕೇಳೋ ಕನಿಷ್ಠ ನೈತಿಕತೆಯು ಅವನಲ್ಲಿಲ್ಲ, ಆತ ಕ್ಷಮೆಗೆ ಅರ್ಹನೂ ಅಲ್ಲ” ಅನ್ನೋ ವಿಷಾದ ನುಡಿಗಳನ್ನ ನಾನು ಬಹಳ ಕೇಳಿದ್ದೇನೆ. ಇರಲಿ, ಅವರು ಕ್ಷಮೆ ಕೇಳದಿದ್ದರೇನಂತೆ, ಸ್ವ-ಕ್ಷಮಾಗುಣ ನಮ್ಮದಾದರೆ ಹೇಗೆ.. ನಮ್ಮನ್ನು ನೋಯಿಸಿದವರನ್ನು ಕ್ಷಮಿಸೋದು ನಮ್ಮ ದೊಡ್ಡತನ ಅಂತ ನಾನೇನು ಹೇಳಲ್ಲ. ಇದು ನಮ್ಮ ಒಳಿತಿಗಾಗಿಯೇ ಅನ್ನೋ ಸ್ವಾರ್ಥ ಅಡಗಿದೆ. ಹೇಗಂತೀರಾ?..

ನೋಡಿ, ಒಬ್ಬ ವ್ಯಕ್ತಿಯ ಮೇಲಿನ ನಮ್ಮ ದ್ವೇಷ ಅಸಮಾಧಾನಗಳು, ಆತನೇ ನಮ್ಮ ಹೆಗಲ್ಲನ್ನೇರಿ ಕುಳಿತಂತೆಯೇ ಸರಿ. ಅದು ಒಂಥರಾ ಅನವಶ್ಯಕ ಹೊರೆ ಅನಿಸೋದಿಲ್ವೇ? ಆತ ನಮ್ಮಲ್ಲಿನ ಉತ್ಸಾಹ, ಇಚ್ಛಾಶಕ್ತಿ,ಮನೋಶಾಂತಿ ಎಲ್ಲವನ್ನೂ ಕಸಿದಂತೆ ಭಾಸವಾಗೋದಿಲ್ಲವೇ?. ಹಾಗಾಗಿ ಆತನನ್ನು ನಾವೇ ಕ್ಷಮಿಸಿಬಿಟ್ಟರೆ ಕ್ರಮೇಣ ನಮ್ಮ ಮೇಲಿನ ಹೊರೆ ಇಳಿದು, ಹಗುರ ಮನಸ್ಸು ನಮ್ಮದಾಗುತ್ತೆ.

ಎಲ್ಲೋ ಓದಿದ ನೆನಪು- ಕ್ಷಮೆ ಅನ್ನೋದು ಮಲ್ಲಿಗೆ ಹೂವನ್ನು ತುಳಿದ ಕಾಲಿಗೆ ಅಂಟಿ ಹರಡುವ ಸುಗಂಧದಂತೆ. ಈಚೆಗೆ ನನಗನಿಸಿದಂತೆ, ನಮ್ಮನ್ನು ನೋಯಿಸಿದವರ ಬಗ್ಗೆ ಚಿಂತಿಸುಲು ವ್ಯಯಿಸುವ ಪ್ರತಿಯೊಂದು ಘಳಿಗೆಯು, ನಮ್ಮ ಜೀವನದ ಅತಿ ಅಮೂಲ್ಯ ಕ್ಷಣಗಳಿಂದ ಕದ್ದಂತೆಯೇ.

So, forgive and move on, though they are not worth of it. ನನ್ನ ಕ್ಷಮಾ ಪಟ್ಟಿಯನ್ನು ತೆರೆದು ಕ್ಷಮಿಸಲು ಪ್ರಾರಂಭಿಸಿದ್ದಾಯಿತು, ನೀವೂ ಶುರು ಹಚ್ಕೊಳ್ಳಿ.

ಕೊನೆಯದಾಗಿ, ಕ್ಷಮೆ ಇರಲಿ !

ಮುಂಜಾನೆ ರಾಗ

ಬೆಳಗಾಗಲು ಚುಮುಚುಮು ಚಳಿಯು
ಮಂಜಿನ ಹನಿಗಳ ಸಡಗರ..
ಹಕ್ಕಿ ಪಕ್ಷಿಗಳ ಚಿಲಿಪಿಲಿಯು
ಬಾನಲಿ ನಯನ ಮನೋಹರ..

ಗಿರಿಗಳ ನಡುವಲಿ ಮೆಲ್ಲನೆ ರವಿಯು
ಇಣುಕಲು ಸುಂದರ ಜಗವ,
ಕೊರೆಯುವ ಚಳಿಯಲೂ ಮೈಮರೆತನು ಕವಿಯು
ಕಾಣಲು ಧರೆಯ ಸ್ವರ್ಗವ..

ಪರಮ-ಆತ್ಮ

ಈ ಹಿಂದೆ ನಮ್ಮೊಳಗಿನ potential energyಯ ಬಗ್ಗೆ ಯಥಾವತ್ತಾಗಿ ಬರೆದಿದ್ದೆ. ಮನಸಿಗೆ ಬಂದಿದ್ದನ್ನು ಗೀಚಿ ಅಲ್ಲಿಗೇ ಬಿಡೋ ಜಾಯಮಾನ ನಂದು, ಆದ್ರೆ ಈ ವಿಷಯ ಸ್ವಲ್ಪ ಮನಸ್ಸಿನ ಆಳ ಕೆದಕಿದಂತಿತ್ತು. ಬಹುತೇಕ ನಾವೆಲ್ಲರೂ ಇನ್ನೂ ಅರಿಯಲಾಗದಂಥ ಶಕ್ತಿಯೊಂದು ನಮ್ಮಲ್ಲಿದೆ ಅಂತ ಆದ್ರೆ ಅದು ಏನಿದ್ದಿರಬಹುದು, ಹೇಗಿದ್ದಿರಬಹುದು ಅಂತೆಲ್ಲಾ ಪ್ರಶ್ನೆಗಳು ಒಂದಕ್ಕೊಂದು ಅಂಟಿ Chain reactions ಹೆಚ್ಚಾಗಿದ್ದವು. ಅದೇ ಸಮಯಕ್ಕೆ ನಾನು ಓದ್ತಾ ಇದ್ದ “Who will cry when You die” ಅನ್ನೋ ಒಂದು ಇಂಗ್ಲಿಷ್ ಲೇಖನದಲ್ಲಿ ಇದರ ಬಗ್ಗೆ ಹೇಳಿರೋದು ಓದಿದ್ದೆ. ಅದರಲ್ಲಿ ಚಂದದ ಕಲ್ಪನೆಯೊಂದಿಗೆ ಈ ವಿಷಯವನ್ನ ಅದ್ಬುತವಾಗಿ ವಿವರಿಸಿದ್ದಾರೆ ರಾಬಿನ್ ಶರ್ಮ ರವರು.

ಸಾವಿರಾರು ವರ್ಷಗಳ ಹಿಂದೆ- ಭೂಮಿಯ ಮೇಲೆ ನಡೆದವರೆಲ್ಲಾ ದೇವರು ಅಥವಾ ದೇವರ ಶಕ್ತಿ ಉಳ್ಳವರು ಎಂಬ ನಂಬಿಕೆ ಇತ್ತಂತೆ. ಆದರೆ ಮನುಕುಲವು ಈ ಶಕ್ತಿಯನ್ನು ತಮಗೆ ಮನ ಬಂದಂತೆ ಬಳಸುತ್ತಿದ್ದರು. ಇದರ ತೀವ್ರತೆ ಅರಿತ್ತಿದ್ದ ದೇವರು, ಅನಾಹುತ ಎರಗುವ ಮುನ್ನವೇ ಈ ಎಲ್ಲಾ ಶಕ್ತಿ-ಯುಕ್ತಿಗಳ ನೆಲೆಯಾದ ‘ಪರಮ-ಆತ್ಮ'(greatly admired soul)ವನ್ನು ಬಚ್ಚಿಡಲು ಸಿದ್ಧತೆ ನಡೆಸಿದರು. ಆದರೆ ಎಲ್ಲಿ ಬಚ್ಚಿಡುವುದು ಅನ್ನೋ ಗೊಂದಲದಿಂದ ಹಲವಾರು ಸಲಹೆಗಳ ಮೊರೆ ಹೋದರಂತೆ ದೇವರು! ಆಗ ದೇವಾನುದೇವತೆಗಳ ಸಮ್ಮುಖದಲ್ಲಿ, ಕೆಲವರು ಮಹಾ ಸಾಗರದ ತಳದಲ್ಲಿ ಮುಚ್ಚಿಡಲು ಹೇಳಿದರೆ , ಇನ್ನು ಕೆಲವರು ದೈತ್ಯ ಪರ್ವತಗಳ ತುಟ್ಟ ತುದಿಯಲ್ಲಿ ಇಡಲು ಸಲಹೆ ನೀಡಿದರು. ಮನುಷ್ಯನ ಸಾಮರ್ಥ್ಯವನ್ನು ಅಂದೇ ಅರಿತಿದ್ದ ದೇವರು, ಸುದೀರ್ಘ ಚಿಂತನೆಯ ನಂತರ ಆ ‘ಪರಮ-ಆತ್ಮ’ವನ್ನು ಮನುಷ್ಯನ ಮನಸ್ಸಿನ ಆಳದಲ್ಲಿಯೇ ಇಡಲು ನಿರ್ಧರಿಸಿದರು. ಯಾಕೆಂದರೆ, ಮನುಷ್ಯ ತನ್ನದೇ ಮನಸನ್ನು ಎಂದಿಗೂ ಶೋಧಿಸಲಾರನೆಂದು!

ಇದು ಕಲ್ಪನೆಯಾದರೂ ಎಷ್ಟು ನಿಜ ಅನಿಸುತ್ತೆ ಅಲ್ವಾ! ಅವರ ಪ್ರಕಾರ, ದೇವರೇ ಮನುಷ್ಯನ ಸಾಮರ್ಥ್ಯಕ್ಕೆ ಅಂಜಿದ್ದರಂತೆ! ದೇವರ ಇರುವಿಕೆ ಪಕ್ಕಕ್ಕಿಡಿ, ಆದ್ರೆ ಮನುಷ್ಯನ ಸಾಮರ್ಥ್ಯ ಅಷ್ಟು ಪ್ರಬಲವಾದದ್ದೇ! ಇರುವುದ ಬಿಟ್ಟು ಇಲ್ಪದೇ ಇರೋದರ ಬಗ್ಗೆ ಯೋಚಿಸ್ತಾ ಇದೀವಿ, ನಾವು ನಮ್ಮಲ್ಲಿಯೇ ಇರೋ ಪ್ರತಿಭೆಯನ್ನ ಅರಿಯದೆ ಬೇರೆಯವರ ಮೇಲೆಯೇ ಅತಿ ಹೆಚ್ಚು focus ಮಾಡ್ತಾ ಇದೀವಿ ಅನಿಸ್ತಾ ಇದೆ, ಈ ಮಧ್ಯೆ ನಮ್ಮನ್ನ ನಾವು ದುರ್ಬಲರನ್ನಾಗಿಸಿಕೊಂಡಿದ್ದೇವೆಯೋ ಏನೋ!!

ನಿಮ್ಮಲ್ಲಿ ಹ್ಯಾಗೆ?

ಆಫೀಸಿನಲ್ಲಿ ವಾರವಾರವೂ ಕ್ಲೈಂಟ್(client) ಕರೆಯಿರುತ್ತೆ. ವಹಿಸಿದ್ದ ಕೆಲಸದ ಬಗ್ಗೆಯೆಲ್ಲಾ ಮಾತುಕತೆ ಮುಗಿದ ಮೇಲೂ ಸಮಯ ಉಳಿದಿದ್ದರೆ ಇಲ್ಲಿನ ಸದ್ಯದ ವಾತಾವರಣ, ಕಳೆದ ವೀಕೆಂಡು, ಊಟ ಇತ್ಯಾದಿಗಳೆಲ್ಲಾ ಬಂದುಹೋಗುತ್ತವೆ.

ಮೊನ್ನೆ ಅತ್ತ ಕಡೆಯ ‘ಜಾನ್’ ತಾನು ಬರೋ ತಿಂಗಳಲ್ಲಿ ಭಾರತ ಪ್ರವಾಸದಲ್ಲಿರುವ ಬಗ್ಗೆ ಖುಷಿಯಿಂದ ಹೇಳಿದನು. ಹೆಚ್ಚಿನ ಸಾರಿ ಅವನೇ ಮಾತಾಡೋದು, ನಾವು ಹೂಂಗುಟ್ಟೋದು…ಅಂದು ನಾನು ಮಾತನಾಡುತ್ತ ಕೇಳಿದೆ. ನಿಮ್ಮಲ್ಲಿ ಯಾರಾದರೂ ತಾವಿರೋ ದೇಶದ ವಿರೋಧ ಮಾತಾಡಿದರೆ ಏನಾಗುತ್ತೆ ???

” ಹಾಂ??!! ಅರ್ಥ ಆಗಿಲ್ಲ..ಯಾರಾದರೂ ತಮ್ಮ ದೇಶವನ್ನು ವಿರೋಧ ಮಾಡೋದಾದರೆ ಅದೇ ದೇಶದಲ್ಲಿಯೇ ಇದ್ಕೊಂಡು ಮಾಡ್ತಾರಾ ?”

ನಾನಂದೆ..ಇನ್ ಕೇಸ್ ಹಾಗಾದ್ರೆ ನಿಮ್ಮಲ್ ಏನಾಗುತ್ತೆ?!

ಏನಾಗುತ್ತೆ…ಪ್ರೂಫ್ ಇದ್ರೆ ಜೈಲೇ. ಲೈಫ್ ಟೈಮ್ ದೇಶದ್ರೋಹದ ಪಟ್ಟ! ನಿಮ್ಮಲ್ಲಿ ಹ್ಯಾಗೆ???!!

“ಏಸೀ ರೂಮಲ್ ಕೂತು ರಾಜಾರೋಷವಾಗಿ ದೇಶ ಸರಿಯಿಲ್ಲ ಅಂತಾವೆ..ಮತ್ತಿಷ್ಟು ನಾಲಾಯಕ್ ಗಳು I stand with ಅಂತ ಬಕೇಟಿಟ್ಟು ಕೂರ್ತಾವೆ..ಕಾನೂನನ್ನೋದು ಸ್ಥಬ್ಧ! ” ಅಂತ ಹೇಳಬೇಕೆನ್ನಿಸಿತು….ನಂದೇ ದೇಶ..ನಮ್ಮದೇ ಮಾನ.. ಏನೆನ್ನಲಿ …ಹೇಗ್ಹೇಳಲಿ….?

ಜಾನ್ ಮಾತಾಡುತ್ತಲೇ ಇದ್ದನು.” ನಿಮ್ಮಲ್ಲಿ ಹಾಗಾಗಲ್ಲ ಅಲ್ವಾ..ಭಾರತದ ಕಾನೂನಿನ ಬಗ್ಗೆ ಪುಸ್ತಕದಲ್ಲಿ ಓದಿದ್ದೆ… ‘ನೂರು ಅಪರಾಧಿಗೆ ಶಿಕ್ಷೆಯಾಗದಿದ್ದರೂ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು’ ಅಂತ..ಅಲ್ಲಿ ಹುಟ್ಟೋಕೆ ಆಗದಿದ್ದರೇನು…ಭಾರತದ ಜೊತೆಗಿನ ವ್ಯವಹಾರ ಇರೋ ಕಂಪೆನೀಲಿ ಕೆಲಸ ಸಿಕ್ಕಿದ್ದು ನನ್ನ ಅದೃಷ್ಟ..ರಿಯಲೀ ಪ್ರೌಡ್..ಅಲ್ಲಿನ ಜನರಿಗಿರುವ ಪ್ರೀತಿ, ಅನುಕಂಪ ಕ್ಷಮಾಗುಣ ಜಗತ್ತಿನ ಬೇರ್ಯಾವ ದೇಶದಲ್ಲೂ ಇಲ್ಲ……”

ಇನ್ನೇನ್ ಮಾಡ್ಲಿ, ಅಳಲಾರದೇ ನಕ್ಕೆ!

ನಮ್ಮೊಳಗಿನ ಶಕ್ತಿ

“ಒಂದ್ ಹೇಳ್ಲಾ.. ನೀವ್ಯಾಕೆ ಬರೆಯೋದನ್ನ ಪ್ರೊಫೆಷನ್ ಮಾಡ್ಕೊಬಾರ್ದು?…”
ಹೀಗಂತ ದೂರದ ಫಿನ್ಲ್ಯಾಂಡ್ನಲ್ಲಿರೋ ನನ್ನ ಗೆಳತಿಯೊಬ್ಬರು ಕೇಳಿದ್ರು.. ಇವಾಗ್ ತಾನೇ ಓದು ಮುಗಿಸಿ ಕೆಲ್ಸ-ಗಿಲ್ಸ ಅಂತ ಜೀವನ ಆರಂಭಿಸಿರೋ ನನಗೆ ವೃತ್ತಿಪರ ಬರಹ ಸ್ವಲ್ಪ ಕಷ್ಟಾನೇ.. ಆದ್ರೂ ಆಕೆ ಹೇಳ್ದಾಗಿಂದ ಯಾಕೋ ನನ್ನ ಮನಸ್ಸು ಬರಹದ ಕಡೆಗೆ ಜಾಸ್ತಿ ಒಲವು ತೋರಿ‍ಸ್ತಾ ಇದೆ..

ಹಾಗಂತ ಮೊನ್ನೆ ಪೆನ್ನು-ಪೇಪರ್ ಹಿಡಿದು ಬರೆಯುವ ಅಂತ ಕೂತ್ರೆ ಒಂದೇ ಒಂದ್ ಪದ ಹೊಳೀಬಾರ್ದಾ ಈ ತಲೆಗೆ!!. ಅರ್ಧಗಂಟೆಗೂ ಹೆಚ್ಚಿಗೆ ಯೋಚನೆ ಮಾಡಿ, ಸುಮಾರು 15-20 ಹಾಳೆಗಳು ಕಸದ ಬುಟ್ಟಿ ಸೇರಿಕೊಂಡ್ರೂ , ಒಂದೊಳ್ಳೆ ಕವಿತೆ ಬರೆಯೋಕೆ ಆಗಲಿಲ್ಲ…

“When Man proposes , God disposes ” ಅನ್ನೋದು ನಿಜ ಅನ್ನಿಸಿತು. ದೊಡ್ಡ ಲೇಖಕನ ಹಾಗೆ ಬ್ಲಾಗ್ ತೆರೆದು, ಏನ್ ಬರೀಬೇಕಪ್ಪ ಅಂತ ಕಣ್ಣು ಬಾಯಿ ಬಿಡುತ್ತಿದ್ದೆ.. ಇದೆಲ್ಲ ನನ್ನಂಥವರಿಗಲ್ಲ ಅಂದುಕೊಂಡು ಕೈಲಿದ್ದ ಪೆನ್-ಪೇಪರ್ ಬಿಸಾಡಿದೆ. ಹಾಗೇ ಪಕ್ಕದ ಗೋಡೆಗೆ ಒರಗಿ ಸ್ವಲ್ಪ ಯೋಚಿಸಿದಾಗ ನನ್ನ ಅರಿವಿಗೆ ಬಂದಿದ್ದಿಷ್ಟೇ‌‌.. ನನಗೆ ಪುಟಗಟ್ಟಲೆ ಬರೆಯೋ ಕುತೂಹಲವಿದ್ರೂ , ಏನನ್ನು ಬರೆಯ ಹೊರಟಿದ್ದೆನೆಂಬುದು ಸ್ಪಷ್ಟವಾಗಿರಲಿಲ್ಲ. ಅದಕ್ಕೇ ಏನೋ ನನ್ನ ಪದಪುಂಜವೂ ಪೂರಕವಾಗಲಿಲ್ಲ..

ಇನ್ನೂ ಆಳಕ್ಕೆ ಯೋಚಿಸಿದಾಗ ಅನ್ಸಿತ್ತು, ನಮ್ಮ ಜೀವನ ಕೂಡ ಹೀಗೇ ಇರಬಹುದಾ ಅಂತ.
ಹೌದು, ಬಹುತೇಕ ಜನ (ನಾನೂ ಸೇರಿ) ಕೇವಲ ಮೇಲ್ನೋಟಕ್ಕೆ ನಾನು ಹೀಗೆ ಬದುಕಬೇಕು, ಆ levelಗೆ ಹೋಗಬೇಕು , ಅದು ಇದು ಅಂತ ವ್ಯರ್ಥ ಯೋಚನೆ ಮಾಡ್ಕೊಂಡೇ ಏನೂ ಮಾಡಲ್ಲ.. ಹೈ ಸ್ಕೂಲಿನ ವಿಙ್ಮಾನದ ಪಾಠದ ಪ್ರಕಾರ ” The energy’s intense depends, not on its kinetic form, rather on its potential form” ಅನ್ನೋದು ನಮ್ಮ ಜೀವನಕ್ಕೂ ಸಂಬಂದಿಸಿದೆ.
ನಮಗೆಲ್ಲಾ ಬೆಟ್ಟಾನೇ ದಬಾಕೋ Kinetic energy ಇದೆ, ಆದ್ರೆ ಜೀವನದಲ್ಲಿ ಎಲ್ಲಿಗೆ ಹೋಗಿ ನಿಲ್ಬೇಕು ಅನ್ನೋ ಆ ಒಂದು Potential energyಯ ಕೊರತೆ ಇದೆ.. ಇದ್ದರೂ ಅದನ್ನ ಹುಡುಕೋದ್ರಲ್ಲಿ ಕೆಲವರು ವಿಫಲರಾಗಿದ್ದೇವೆ..
ನಾನು ಈಗ ಬಿಸಾಡಿದ ಪೆನ್-ಪೇಪರ್ ನ ಹುಡುಕಾಟದಲ್ಲಿ ಇದ್ದೇನೆ, ನೀವೂ ಪ್ರಯತ್ನ ಮಾಡಿ.. ಯಾಕೆ ಅಂದ್ರೆ ಕಥೆಯ Climax ಹೇಗಿರಬೇಕು ಅಂತ ಗೊತ್ತಿದ್ರೆ, ಅದಕ್ಕೆ ಒಳ್ಳೆಯ ಮುನ್ನುಡಿ ಬರೀಬಹುದು..

ಒಳ್ಳೇದಾಗ್ಲಿ !