ಕ್ಯೂಬಿಕಲ್ ಕಥೆಗಳು – ರಥವೇರಿ ಬಂದವಳು


ಸಮಯ ಹನ್ನೊಂದರ ಗಡಿ ದಾಟಿ ಸೂರ್ಯ ನೆತ್ತಿಗೇರೋ ಹೊತ್ತಾಗಿತ್ತು.. 3% ಬ್ಯಾಟರಿಯ ಹೊತ್ತು ಅಳಿವಿನಂಚಿನಲ್ಲಿದ್ದ ಫೋನು ಒಂದೇ ಸಮನೆ ಗಂಟಲ ಹರಿದು ಕೂಗಿ ಬಡಿದೆಬ್ಬಿಸಿದಾಗಲೇ ಗೊತ್ತಾಗಿದ್ದು ಆಫೀಸಿಗೆ ಅದಾಗಲೇ ಸಮಯವಾಗಿತ್ತೆಂದು. Appraisalನ ಆಸುಪಾಸಲ್ಲಿ ಇದ್ದ ಕಾರಣ ಮ್ಯಾನೇಜರನ್ನು ಮೆಚ್ಚಿಸಲು ಹಿಂದಿನ ರಾತ್ರಿ ತುಸು ಹೆಚ್ಚೇ ಕೆಲಸ ಮಾಡಿ ತಡರಾತ್ರಿ ನಿದ್ದೆಗೆ ಜಾರಿ, ಹಸಿವೆಯ ಪರಿವಿಲ್ಲದೆ ಮಲಗಿದ್ದವನನ್ನು ಒಂದೇ ಕ್ಷಣಕ್ಕೆ ಎಚ್ಚರಿಸಿದ್ದು ” ಹಲೋ.. ” ಎಂದು ಫೋನಲ್ಲಿ ಕರೆದವಳ ದನಿ.. ಒಮ್ಮೆಲೆಗೇ ಗುಲಾಬ್ ಜಾಮೂನೊಂದನ್ನು ಸಿಹಿಜೇನಲ್ಲಿ ಅದ್ದು ತಿಂದಂತೆನಿಸಿತ್ತು..
“Cab is on the way, we ll be there in half an hour” ಅಂತಂದವಳು ಪಟಕ್ಕನೆ ಕರೆಯನ್ನು ಕತ್ತರಿಸಿದ್ದಳು..

ಹೌದು, ಅವಳೇ.. ಕ್ಯಾಬ್ ನಲ್ಲಿ ಕಂಡ ದುಂಡು ಕಂಗಳ ಚೆಲುವೆ.. ಕಳೆದ ಮೂರು ದಿನಗಳಿಂದಷ್ಟೇ ತಾನು ಹೋಗೋ ಕ್ಯಾಬ್ ನಲ್ಲಿ ಬರುತ್ತಿದ್ದರಿಂದ ಹೆಸರು, ಪ್ರಾಜೆಕ್ಟ್ ನ ಬಗ್ಗೆ ಮಾಹಿತಿ ಇಲ್ಲದಿದ್ದರೂ ಮೊದಲ ದಿನ ಕಾರಣವಿಲ್ಲದೆಯೇ ಎಸೆದಿದ್ದ ಕಿರುನಗು ಚಿರಪರಿಚಿತವಾಗಿತ್ತು..

ಎದ್ದವನೇ ಮಿಂಚಿನಂತೆ ಆಫೀಸಿಗೆ ಸಿದ್ಧವಾಗಿ pickup pointನಲ್ಲಿ ತವಕದಿ ಕಾಯುತ್ತಿರಲು, ತನ್ನೆಡೆಗೆ ಧಾವಿಸಿದ ಕ್ಯಾಬ್ ನಲ್ಲಿ ರಥವೇರಿ ಬಂದ ರಾಜಕುಮಾರಿಯಂತೆ ಮುಂದಿನ ಸೀಟ್ ನಲ್ಲಿ, ಕಿವಿಗೆ earphones ಏರಿಸಿ, ನೀಳ ಕೂದಲ ನೇವರಿಸಿ ಕುಳಿತಿದ್ದಳು. ಹಿಂದಿನ ಸೀಟ್ ನಲ್ಲಿ ಕೂತವನೇ ಆಕೆಯ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕಲು ಹೊಂಚಿಸುತ್ತಿರುವಾಗಲೇ ದಾರಿದೀಪವಾಗಿದ್ದು ಸಹಿ ಮಾಡಲು ಡ್ರೈವರ್ ಅಣ್ಣ ಕೊಟ್ಟ Trip sheet! ಆಹಾ!! ತಟ್ಟನೇ ಆಕೆಯ Employee IDಯನ್ನು ಕಣ್ಣಲ್ಲೇ ಸೆರೆಹಿಡಿದು ಏನೋ ಸಾಧಿಸಿದವನಂತೆ ಕಾಲರ್ ಎಗರಿಸಿದನ್ನು ಅವಳು ಕನ್ನಡಿಯಲ್ಲಿ ನೋಡಿದ್ದು, ನಗು ಬೀರಿದ್ದು, ಇಷ್ಟು ಸಾಕಾಗಿತ್ತು ಹಾಳಾಗಲು..

ಕ್ಯಾಬ್ ನಿಂದ ಇಳಿದು ನೇರವಾಗಿ ಕ್ಯೂಬಿಕಲ್ ಸೇರಿ ಮೊದಲು ಮಾಡಿದ್ದು skypeನಲ್ಲಿ ಅವಳ ಹುಡುಕಾಟ. Employee ID ಬಳಸಿ ಆಕೆಯ ಹೆಸರು, ಫೋನ್ ನಂಬರ್ ಹಾಗೂ ಪ್ರಾಜೆಕ್ಟ್ ತಿಳಿದು ಬಂದಿತ್ತು. ಅದೇ ಪ್ರಾಜೆಕ್ಟ್ ನಲ್ಲಿರೋ ಗೆಳೆಯನನ್ನು ರಾತ್ರಿಯ ಊಟದ ವೇಳೆಗೆ ಸಿಗಲು ಹೇಳಿ ಕೆಲಸ ಮುಂದುವರೆದಿತ್ತು..

ಎಂದಿನಂತೆ ಊಟಕ್ಕೆ ಕೂಪನ್ ಪಡೆಯಲು ಸಾಲಲ್ಲಿ ನಿಂತಿದ್ದಾಗ ಅಲ್ಲೆಲ್ಲೋ ಮೂಲೆಯ ಟೇಬಲ್ಲೊಂದರ ಸುತ್ತ ಗುಂಪೊಂದು ಕಟ್ಟಿತ್ತು. ಊಟಕ್ಕೆ ಸಿಗಬೇಕಿದ್ದ ಗೆಳೆಯನೂ ಆ ಗುಂಪಿನಲ್ಲಿದ್ದರಿಂದ ಬಳಿ ಹೋದಾಗ, ಗುಂಪಿನ ಮಧ್ಯದಲ್ಲಿ ಇದ್ದದ್ದು ಅವಳೇ!! ಶುಭ್ರ ನಗುವಿನಿಂದ ಅರಳಿತ್ತು ಅವಳ ಮೊಗವು, ಮತ್ತು ಮುಂದಿದ್ದ ಕೇಕ್ ಮೇಲಿನ ದೀಪಗಳ ಕಮಲದ ಹೂವೂ..!!

ಅರೆರೇ ಇಂದು ಅವಳ ಹುಟ್ಟುಹಬ್ಬವೇ ಎಂದು ಖುಷಿ ಪಡುತ್ತಾ ನಿಂತಿದ್ದ ನನ್ನನು ಕಂಡ ಗೆಳೆಯನು ಬಳಿ ಬಂದು ” Sorry ಬ್ರೋ.. ನನ್ನ್ colleagueದು last working day ಇವತ್ತು, ಅದ್ಕೆ farewell ಮಾಡ್ತಿದ್ವಿ.. ನೀನು ಊಟ ಮಾಡ್ತಿರು, I ll join you in few minutes” ಅಂದಿದ್ದೇ ತಡ ಅವಳ ಕೈಲಿದ್ದ ಪ್ಲಾಸ್ಟಿಕ್ ಚಾಕು ಎದೆಗೆ ಇರಿದಂತಾಗಿತ್ತು. ಕಮಲದ ಹೂವಲ್ಲಿದ್ದ ದೀಪಗಳು ತಣ್ಣಗಾದವು ಅವನ ನಗುವಿನಂತೆ.. ಕ್ಷಣ ಮಾತ್ರದಲ್ಲೇ ಪೇಸ್ಟ್ರಿ ಕೇಕು ಚೂರು ಚೂರಾಗಿತ್ತು ಆಗಷ್ಟೇ ಶುರುವಾದ ಕನಸುಗಳಂತೆ..

ಕಲೆ ಹಾಕಿದ್ದ ಫೋನ್ ನಂಬರನ್ನು ಡಿಲೀಟಿಸಿ ಸಪ್ಪೆ ಮೋರೆ ಹಾಕಿ ದೂರದ ಟೇಬಲ್ ಹಿಡಿದು ಅರೆಬೆಂದ ಚಪಾತಿ ತಿಂದು ಮುಗಿಸಿ, ಮೂರು ದಿನಗಳಿಂದ ಡೆಸ್ಕ್ ಟಾಪ್ ನ ಮೂಲೆ ಹಿಡಿದಿದ್ದ report ನೆನಪಾಗಿ ಕ್ಯೂಬಿಕಲ್ ಕಡೆಗೆ ಹೆಜ್ಜೆ ಹಾಕಿದ್ದನು..

*********************

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s