IT ಹಾಡು-ಪಾಡು

ಅಂದೊಂದು ದಿನ ನಾನು ಕಪಾಟಿನ (cupboard) ಬಾಗಿಲು ತೆಗೆಯೋದಕ್ಕೂ, ಅದರ ಒಳಗೆ ನಡೀತಾಯಿದ್ದ ಸಂಭಾಷಣೆಯ ಈ ತುಣುಕು ಕೇಳೋದಕ್ಕೂ ಒಂದೇ ಆಯ್ತು ನೋಡಿ! “…ಬನ್ನಿ ಬನ್ನಿ, ಯಾವಾಗ್ ನೋಡುದ್ರೂ ಐ.ಟಿ ಉದ್ಯೋಗಿಗಳ ಥರ ಬರೀ ನಿಮ್ಮದೇ ಗುಂಗಿನಲ್ಲಿ ಇರ್ತೀರಿ, ವಾಸ್ತವಕ್ಕೆ ಬನ್ರೋ ಕಾರ್ಯಕ್ರಮ ಆರಂಭ ಮಾಡೋಣ”

ಎಲಾ ಇವನಾ, ನಮ್ಮ ಬಗ್ಗೆ ಇಷ್ಟು ಅಥಾರಿಟಿಯಿಂದ ಮಾತಾಡೋರು ಯಾರಪ್ಪಾ ಅಂತ ಪೂರ್ತಿಯಾಗಿ ಬಾಗಿಲು ತೆಗೆದು ನೋಡಿದ್ರೆ ಸೆಪ್ಟೆಂಬರ್ ತಿಂಗಳಿನಲ್ಲಿ ಪೆಚ್ಚು ಮೋರೆಯ ದರ್ಶನ ಕೊಟ್ಟು ಕೊನೆಗೆ ಧೂಳಿಡಿದು ಕೂತಿದ್ದ ಕೆಲವು ಪುಸ್ತಕಗಳು, ಹಳೆಯ ಡೈರಿ ಎಲ್ಲರೂ ಕಂಡು ಬಂದರು.
ಹಿರಿಯರೆಲ್ಲ ಸೇರಿ ಆಯೋಜಿಸಿದ್ದ ‘ಕಾರ್ಯಕ್ರಮ’ವನ್ನು ಆರಂಭಿಸುವ ಗುಂಗಿನಲ್ಲಿದ್ದವರು ಆ ಮಟ್ಟಿಗೆ ವ್ಯಸ್ತರಾಗಿ ಕಂಡುಬಂದುದು ನನಗೆ ಸ್ವಲ್ಪ ಖುಷಿ ತಂದಿತು. ನಾನು ಕಪಾಟಿನ ಬಾಗಿಲನ್ನು ತೆಗೆದ ಫಲವಾಗಿ ದಿಢೀರನೆ ಹೆಚ್ಚಿದ ಬೆಳಕನ್ನು ಕಂಡು ತಮ್ಮ ಕಾರ್ಯಕ್ರಮಕ್ಕೆ ಅದ್ಯಾರಪ್ಪಾ ಭಂಗ ತಂದವರು ಎಂದು ಹುಬ್ಬೇರಿಸುತ್ತಲೇ ನನ್ನತ್ತ ನೋಡಿದ ಪುಸ್ತಕ ಮಹಾಶಯರು, “ಓಹ್, ಏನ್ಸಾರ್ ಬಾಳಾ ಅಪರೂಪ ಆಗಿದ್ದೀರಾ ಇತ್ತೀಚಿಗೆ!?” ಎಂದು ಒಕ್ಕೊರಲಿನಿಂದಲೇ ತಮ್ಮ ಆಶ್ಚರ್ಯವನ್ನು ಸೂಚಿಸುತ್ತಲೇ ಪ್ರಶ್ನೆಯೊಂದನ್ನು ಎಸೆದರು

ನಾನಿದ್ದೋನು, “ಹೌದಲ್ವಾ, ಹೇಗಿದ್ದೀರಾ ಮತ್ತೆ? ಏನು ಸಮಾಚಾರ, ಏನೋ ಗಡಿಬಿಡಿ ನಡೀತಾ ಇರೋ ಹಾಗಿದೆ?” ಎಂದೆ.

ವಯಸ್ಸಾದ ಡೈರಿಯು ಉತ್ತರ ಕೊಡುವ ಹವಣಿಕೆ ಮಾಡುತ್ತಾ, “ಹೀಗಿದೀವಿ ನೋಡಿ, ಸದ್ಯ ಕಳೆದ ಬಾರಿ ನೀವು ಎಗ್ಗಿಲ್ದೆ ಬರೆದು ಗೀಚಿ ಹಾಳೆ ಹರಿದ ಹಾಗೆ ಈ ಬಾರಿ ಆಗ್ಲಿಲ್ಲವಲ್ಲಾ, ಒಂದಿಷ್ಟು ಹಾಳೆ ಉಳಿದಿರೋದೇ ಹೆಚ್ಚು” ಎಂದು ಉತ್ತರಕೊಡುವ ಹೊತ್ತಿಗೆ ಅದರ ಜೊತೆಗಾರ, “ಊರ್ ತುಂಬಾ ಎಷ್ಟೊಂದು ಜನ ಇದ್ರೂ ನೋಡಿ ಕೊನೆಗೆ ನಮ್ಮ ಕಾರ್ಯಕ್ರಮ ಅಂತಂದ್ರೆ ಇಷ್ಟೇ ಜನ ಬರೋದು!” ಎಂದು ಅಸಮಾಧಾನವನ್ನು ವ್ಯಕ್ತಪಡಿಸಿತು.

ನಾನು, “ಅದೇನೋ ಐ.ಟಿ ಬಗ್ಗೆ ಹೇಳ್ತಾ ಇದ್ರಲ್ಲ, ಅವರುಗಳ ಬಗ್ಗೆ ನಿಮಗೇನ್ ಗೊತ್ತಿರೋದು?” ಎಂದೆ ಕೆದಕಿ ನೋಡಿದ್ದಕ್ಕೆ.

ಇಬ್ಬರೂ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡು ಏನ್ ಹೇಳೋದೂ ಬಿಡೋದು ಗೊತ್ತಾಗದೇ ಒಂದು ಕ್ಷಣ Interview ಮುಗಿಸಿ ಫಲಿತಾಂಶಕ್ಕೆ ಕಾಯೋರ ಹಾಗೆ ದಿಟ್ಟಿಸಿ ನೋಡ್ತಾ ನಿಂತುಕೊಂಡವು. ಸ್ವಲ್ಪ ಸುಧಾರಿಸಿಕೊಂಡು ಬಲಗಡೆ ಇದ್ದ ಪುಸ್ತಕ ಹೇಳಿತು, “ನಮಗೇನ್ ಗೊತ್ತು ಸಾರ್, ನಾವ್ ನಮಗೆ ಕಂಡದ್ದು ಹೇಳಿದ್ವಿ ಅಷ್ಟೇ, ನೀವುಗಳು ಯಾವಾಗ ನೋಡುದ್ರೂ ತಮ್ಮ ಗುಂಗ್ನಲ್ಲೇ ಇರ್ತೀರಿ. ಆಕಾಶ ತಲೆ ಮೇಲೆ ಬಿದ್ದವರಂತೆ ಯಾವಾಗ ನೋಡುದ್ರೂ ನಿಮ್ಮದೇ ನಿಮಗೆ ಅತಿಯಾಗಿ ಹೋಗಿರುತ್ತೆ, ತಾವುಗಳೇ ಅತೀ ಬುದ್ದಿವಂತರು ಅನ್ನುವಂಥ ಸ್ವಾರ್ಥಿಗಳನ್ನು ನಾನು ಯಾವತ್ತೂ ನೋಡೇ ಇಲ್ಲ, ಅದಕ್ಕೇ ಹಂಗದ್ದದ್ದು!” ಎಂದು ದೊಡ್ಡ ವಾಗ್ದಾಳಿಯೊಂದನ್ನು ಮಾಡಿ ಸುಮ್ಮನಾಯಿತು.

ಅದು ಹೀಗೆಂದಾಗ ಕೂಡಲೇ ನಾನೇನು ಹೇಳೋದು ಅಂತ ತಲೆ ಕೆರೆದು ಏನೂ ಹೊಳೀದೆ, ನಮ್ಮ ಮ್ಯಾನೇಜರ್ ಹೇಳೋ ಹಾಗೆ, “ಅದು ನಿಮ್ಮ ನಿಮ್ಮ ಅನಿಸಿಕೆ ಅಭಿಪ್ರಾಯ ಅದಕ್ಕೆ ನೀವೇ ಬಾಧ್ಯಸ್ಥರು…ಅದು ಸುಳ್ಳೋ ನಿಜಾನೋ ಅಂತ ಮಾತಾಡ್ತಾ ಹೋದ್ರೇ ದೊಡ್ಡ ವಾದಾನೇ ನಡೆದು ಹೋಗುತ್ತೆ, ಅದರ ಬದಲಿಗೆ ಅದನ್ನ ಅಲ್ಲಿಗೆ ಬಿಡೋದೇ ವಾಸಿ” ಎಂದು ಹೇಳಿ ಕೈ ತೊಳೆದುಕೊಳ್ಳಲು ನೋಡಿದೆ.

ಆಗ ಎಡಗಡೆ ಇದ್ದ ಡೈರಿಯು “ಅಲ್ರಿ, ಹೀಗೆ ಒಂದು ಸಮೂಹದ ಮೇಲೆ ನಾವು ಏನಾದ್ರೂ ಹೇಳ್ಲಿ ಅದನ್ನ ಅವರವರ ಅಭಿಪ್ರಾಯ ಅಂತ ಹೇಳಿಬಿಟ್ಟು ಸುಮ್ನೆ ಕೈ ತೊಳಕೊಳಕ್ಕೆ ನೋಡ್ತೀರಲ್ಲಾ, ನಿಮಗೆ ಕೆಚ್ಚು ಸ್ವಾಭಿಮಾನ ಅನ್ನೋದು ಸ್ವಲ್ಪಾನೂ ಇಲ್ವೇ ಮತ್ತೆ?” ಎಂದು ಹೇಳ್ತಾ ಇದ್ರೆ ಮತ್ತೊಂದು “ಇದ್ದಿದ್ರೆ Appraisal ಸಮಯ ಬಂದಾಗ ಮಾನೇಜರ್ ಗೆ ಬಕೆಟ್ ಹಿಡಿಯೋ ಪರಿಸ್ಥಿತಿ ಯಾಕೆ ಬರುತ್ತಿತ್ತು, ಬಿಡಯ್ಯಾ” ಅಂತ ಮುಖ ತಿರುಗಿಸಿತು.

ನಾನು, “ಥೂ, ಇದೇನಪ್ಪಾ ಗ್ರಹಚಾರ” ಎಂದು ಮನಸ್ಸಿನಲ್ಲೇ ಶಪಿಸಿಕೊಂಡೆ. ಬೇಜಾರಿಗೆ ಓದೋಣ ಅಂತ ಪುಸ್ತಕ ನೋಡಿದರೆ ಈ ಇಬ್ಬರ ಜೊತೆ ವಾದ ಮಾಡಿ ಮೈ ಮನಸ್ಸು ಕೆದರಿಕೊಳ್ಳೋ ಕಷ್ಟ ಯಾವನಿಗೆ ಬೇಕಿತ್ತು?

“ಅಲ್ರೋ, ನಮ್ಮನ್ನ ಕಂಡ್ರೆ ನಿಮಗ್ಯಾಕೆ ಅಷ್ಟೊಂದು ಹೊಟ್ಟೆ ಕಿಚ್ಚು? ಎಲ್ಲೋ ಒಂದು ದೃಷ್ಟಿಕೋನದಿಂದ ಅವರುಗಳನ್ನು ನೋಡಿರಬಹುದಾದ ನೀವು ಪ್ರಪಂಚವನ್ನೇ ತಿಳಿದುಕೊಂಡಿರುವವರ ಹಾಗೆ ಆಡೋದು ಯಾಕೆ? ಊರು-ಮನೆ-ದೇಶ ಬಿಟ್ಟು ಹೋಗಿ ತಮ್ಮ ತಮ್ಮ ಕಷ್ಟದಲ್ಲಿ ಸಿಕ್ಕಿ ಒದ್ದಾಡ್ತಿರೋರನ್ನ ಪೂರ್ತಿ ಅರ್ಥ ಮಾಡಿಕೊಳ್ಳದೆ ಅವರನ್ನ ದೊಡ್ಡ ಸ್ವಾರ್ಥಿಗಳು ಅಂತೀರಲ್ಲಾ ಇದು ಯಾವ ನ್ಯಾಯ?” ಎಂದು ಮೂರ್ನಾಲ್ಕು ಪ್ರಶ್ನೆಗಳನ್ನ ಒಂದೇ ಉಸಿರಲ್ಲಿ ಕೇಳಿ ದಂಗುಬಡಿಸಿದೆ.

ಅದಕ್ಕೆ ನನ್ನ ಮಾತು ಕೇಳಿ ಸಿಟ್ಟೇ ಬಂದಿತು ಅಂತ ಕಾಣ್ಸುತ್ತೆ, “ನಿಮ್ಮದೆಲ್ಲ ಯಾವ ಮಹಾ ಕಷ್ಟ ಬನ್ನಿ ಸಾರ್, ಮೂರೊತ್ತು ಹರಟೆ ಹೊಡಿತಾ ಇರ್ತೀರಿ. ಮೂರು mail ನೋಡೋ ಹೊತ್ತಿಗೆ ಕಾಫಿ ಕುಡಿಯೋಕೆ ಅಂತ ಹೋಗಿ ಅಲ್ಲೂ ಹರಟೆ ಹೊಡಿತೀರಿ. ಫೇಸ್ಬುಕ್ ಯೂಟ್ಯೂಬ್ ಅಂತ ಮುಳುಗಿರ್ತೀರಿ. ಒಂದ್ ದಿನಾನಾದ್ರೂ ಹೊರಗಿನ ಪ್ರಪಂಚದ ಬಗ್ಗೆ ಯೋಚ್ನೆ ಮಾಡಿದ್ದೀರೇನು? ಇನ್ನು on-site ಬೇರೆ. ಓತ್ಲಾ ಹೊಡಿಯೋಕೆ ಡಾಲರ್ರೂ-ಪೌಂಡೂ-ಯೂರೋಗಳನ್ನ ಕೊಟ್ಟು ನಮ್ಮಲ್ಲಿರೋ ರುಪಾಯಿ ಎಣಿಸೋ ಜನಗಳನ್ನ ಕೊಂದು ಬಿಟ್ಟಿದ್ದೀರಿ. ಐ ಫೋನು,ಐ ಪ್ಯಾಡು, ಐ ಟ್ಯಾಬು ಅಂತ ಎಲ್ಲವೂ ‘ಐ’ಯೋಮಯ. ದುಡ್ಡಿನ ಬಾವಿ ತೋಡ್ತೀರೆನು?” ಎಂದು ನನಗೇ ತಿರುಮಂತ್ರ ಹಾಕಲು ನೋಡಿತು.

ನಾನು “ಐ.ಟಿ ಉದ್ಯೋಗಿ ಬಗ್ಗೆ ಬಹುತೇಕ ಜನರಿಗೆ ಇರೋದು ಇದೇ ತಪ್ಪು ಪರಿಕಲ್ಪನೆ. ನಮ್ಮಲ್ಲಿರೋ ಪ್ರತಿ ವಸ್ತುವೂ ಖರೀದಿಯಾಗೋದು EMI ನಲ್ಲೇ ಸ್ವಾಮಿ. ಐಫೋನ್ನಿಂದ ಹಿಡಿದು 48 inch SONY LED TV ವರೆಗೂ ಎಲ್ಲಾ EMIಮಯ. ಬರೋ ಸಂಬಳ ಎಲ್ಲಾ ಅದಕ್ಕೆ ತೆತ್ತು ತಿಂಗಳ ಕೊನೆಗೆ ದಿನ ಎಣಿಸ್ತಾ ಇರ್ತೀವಿ” ಅಂದು ಪೆಚ್ಚುಮೋರೆ ಹಾಕಿ ಸುಮ್ಮನಾದೆ.

“ಸ್ವಂತ ದುಡ್ಡಿನಲ್ಲಿ ಕೊಳ್ಳೋ ಶಕ್ತಿ ಇಲ್ಲದ ಮೇಲೆ ಸಾಲ ಮಾಡಿ ತಗೊಂಡು ಶೋಕಿ ಮಾಡೋ ತವಕ ಆದ್ರೂ ಏನು ಸ್ವಾಮಿ ?” ಎಂದು ಡೈರಿಯು ಸೊಪ್ಪು ಹಾಕಿತು.

“ಇನ್ನೇನು ಮಾಡೋದು. ಮೇಲೇರೋ ಆಸೆ, ಕೆಳಗಿಳಿಯಲು ಬಿಡದ ಸ್ವಾಭಿಮಾನ, ಸಮಾಜದಲ್ಲಿ ಗುರುತಿಸಿಕೊಳ್ಳೋ ತವಕ, ಬೇಗ ಸೆಟಲ್ ಆಗೋ ಆತುರ. ಇವೆಲ್ಲವ ಮೀರಿ ಅಪ್ಪ ಅಮ್ಮನಿಗೆ ನಾವು ಚೆನ್ನಾಗಿದ್ದೀವಿ ಅಂತ ನಂಬಿಕೆ ಬರಬೇಕು, ಅವರಿಗೆ ಸಾರ್ಥಕ ಅನಿಸಬೇಕು”  ಎಂದು ಮತ್ತೆ ಸುಮ್ಮನಾದೆ.

“ಆದ್ರೂ ನೀವೆಲ್ಲ ಓದಿದ್ದಕ್ಕೂ ಮಾಡ್ತಾ ಇರೋ ಕೆಲ್ಸಕ್ಕೂ ಸಂಬಂಧವೇ ಇಲ್ಲ. ಮನಸಲ್ಲಿ ಏನೋ ಆಗ್ಬೇಕು ಅಂತ ಹೊರಟು ಈಗ ಬೇಗ ದುಡ್ಡು ಮಾಡೋ ನಿಟ್ಟಲ್ಲಿ passionನೇ ಮರೆತು ಅದೇನು ಜೀವನ ಮಾಡ್ತೀರೋ ಏನೋ, ನಾವೇ ಪರವಾಗಿಲ್ಲ, ಕೊನೆಯ ಪಕ್ಷ ನಾಲ್ಕು ಜನಕ್ಕೆ ಮನಸಿಗೆ ಮುದ ನೀಡೋ ಕೆಲಸನಾದ್ರೂ ಮಾಡ್ತಿದೀವಿ, ಸಾರಿ ಬಾಗಿಲು ಮುಚ್ಚಿ, ನಮ್ಮ ಕಾರ್ಯಕ್ರಮಕ್ಕೆ ತಡವಾಯ್ತು ’ ಎಂದು ಪುಸ್ತಕವೊಂದು ಮುಖ ತಿರುಗಿಸಿತು.

ನಾನಿದ್ದೋನು, “ಇನ್ನೊಬ್ರ ಬದುಕಿನ ಬಗ್ಗೆ ಬೇಕಾಬಿಟ್ಟಿ ಮಾತನಾಡಿ ಅದೇನು ಕಾರ್ಯಕ್ರಮ ಅಂತ ಸಾಯ್ತಿರೋ, ನಿಮಗೆ ಸಮಯದ ಪ್ರಜ್ಞೆ ಬೇರೆ ಕೇಡಿಗೆ” ಅಂತ ಬಾಗಿಲು ಹಾಕಿ ಆತ್ಮಾವಲೋಕನದಿಂದ ಹೊರಬಂದೆ.

ಅದೇನೇ ಇರಲಿ ಈ ಐ.ಟಿ. ಯ ಎಡಬಿಡಂಗೆ ಜೀವನ ಒಂಥರ ಹಲವು ಜೀವನ ಪಾಠಗಳನ್ನ ಕಲ್ಸಿರೋದಂತು ನಿಜ. ಅದೇ ರೀತಿ ಮನಸ್ಸಿಗೆ ಇಷ್ಟ ಆಗೋ ಒಂದಿಷ್ಟು ಕೆಲ್ಸ ಮಾಡೋದಕ್ಕಿಂತ ಸಾಧನೆ ಬೇರೆ ಇನ್ನೇನಿದೆ, ಅಲ್ಲವೇ?!!

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s