ಕ್ಯೂಬಿಕಲ್ ಕಥೆಗಳು – ರಥವೇರಿ ಬಂದವಳು


ಸಮಯ ಹನ್ನೊಂದರ ಗಡಿ ದಾಟಿ ಸೂರ್ಯ ನೆತ್ತಿಗೇರೋ ಹೊತ್ತಾಗಿತ್ತು.. 3% ಬ್ಯಾಟರಿಯ ಹೊತ್ತು ಅಳಿವಿನಂಚಿನಲ್ಲಿದ್ದ ಫೋನು ಒಂದೇ ಸಮನೆ ಗಂಟಲ ಹರಿದು ಕೂಗಿ ಬಡಿದೆಬ್ಬಿಸಿದಾಗಲೇ ಗೊತ್ತಾಗಿದ್ದು ಆಫೀಸಿಗೆ ಅದಾಗಲೇ ಸಮಯವಾಗಿತ್ತೆಂದು. Appraisalನ ಆಸುಪಾಸಲ್ಲಿ ಇದ್ದ ಕಾರಣ ಮ್ಯಾನೇಜರನ್ನು ಮೆಚ್ಚಿಸಲು ಹಿಂದಿನ ರಾತ್ರಿ ತುಸು ಹೆಚ್ಚೇ ಕೆಲಸ ಮಾಡಿ ತಡರಾತ್ರಿ ನಿದ್ದೆಗೆ ಜಾರಿ, ಹಸಿವೆಯ ಪರಿವಿಲ್ಲದೆ ಮಲಗಿದ್ದವನನ್ನು ಒಂದೇ ಕ್ಷಣಕ್ಕೆ ಎಚ್ಚರಿಸಿದ್ದು ” ಹಲೋ.. ” ಎಂದು ಫೋನಲ್ಲಿ ಕರೆದವಳ ದನಿ.. ಒಮ್ಮೆಲೆಗೇ ಗುಲಾಬ್ ಜಾಮೂನೊಂದನ್ನು ಸಿಹಿಜೇನಲ್ಲಿ ಅದ್ದು ತಿಂದಂತೆನಿಸಿತ್ತು..
“Cab is on the way, we ll be there in half an hour” ಅಂತಂದವಳು ಪಟಕ್ಕನೆ ಕರೆಯನ್ನು ಕತ್ತರಿಸಿದ್ದಳು..

ಹೌದು, ಅವಳೇ.. ಕ್ಯಾಬ್ ನಲ್ಲಿ ಕಂಡ ದುಂಡು ಕಂಗಳ ಚೆಲುವೆ.. ಕಳೆದ ಮೂರು ದಿನಗಳಿಂದಷ್ಟೇ ತಾನು ಹೋಗೋ ಕ್ಯಾಬ್ ನಲ್ಲಿ ಬರುತ್ತಿದ್ದರಿಂದ ಹೆಸರು, ಪ್ರಾಜೆಕ್ಟ್ ನ ಬಗ್ಗೆ ಮಾಹಿತಿ ಇಲ್ಲದಿದ್ದರೂ ಮೊದಲ ದಿನ ಕಾರಣವಿಲ್ಲದೆಯೇ ಎಸೆದಿದ್ದ ಕಿರುನಗು ಚಿರಪರಿಚಿತವಾಗಿತ್ತು..

ಎದ್ದವನೇ ಮಿಂಚಿನಂತೆ ಆಫೀಸಿಗೆ ಸಿದ್ಧವಾಗಿ pickup pointನಲ್ಲಿ ತವಕದಿ ಕಾಯುತ್ತಿರಲು, ತನ್ನೆಡೆಗೆ ಧಾವಿಸಿದ ಕ್ಯಾಬ್ ನಲ್ಲಿ ರಥವೇರಿ ಬಂದ ರಾಜಕುಮಾರಿಯಂತೆ ಮುಂದಿನ ಸೀಟ್ ನಲ್ಲಿ, ಕಿವಿಗೆ earphones ಏರಿಸಿ, ನೀಳ ಕೂದಲ ನೇವರಿಸಿ ಕುಳಿತಿದ್ದಳು. ಹಿಂದಿನ ಸೀಟ್ ನಲ್ಲಿ ಕೂತವನೇ ಆಕೆಯ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕಲು ಹೊಂಚಿಸುತ್ತಿರುವಾಗಲೇ ದಾರಿದೀಪವಾಗಿದ್ದು ಸಹಿ ಮಾಡಲು ಡ್ರೈವರ್ ಅಣ್ಣ ಕೊಟ್ಟ Trip sheet! ಆಹಾ!! ತಟ್ಟನೇ ಆಕೆಯ Employee IDಯನ್ನು ಕಣ್ಣಲ್ಲೇ ಸೆರೆಹಿಡಿದು ಏನೋ ಸಾಧಿಸಿದವನಂತೆ ಕಾಲರ್ ಎಗರಿಸಿದನ್ನು ಅವಳು ಕನ್ನಡಿಯಲ್ಲಿ ನೋಡಿದ್ದು, ನಗು ಬೀರಿದ್ದು, ಇಷ್ಟು ಸಾಕಾಗಿತ್ತು ಹಾಳಾಗಲು..

ಕ್ಯಾಬ್ ನಿಂದ ಇಳಿದು ನೇರವಾಗಿ ಕ್ಯೂಬಿಕಲ್ ಸೇರಿ ಮೊದಲು ಮಾಡಿದ್ದು skypeನಲ್ಲಿ ಅವಳ ಹುಡುಕಾಟ. Employee ID ಬಳಸಿ ಆಕೆಯ ಹೆಸರು, ಫೋನ್ ನಂಬರ್ ಹಾಗೂ ಪ್ರಾಜೆಕ್ಟ್ ತಿಳಿದು ಬಂದಿತ್ತು. ಅದೇ ಪ್ರಾಜೆಕ್ಟ್ ನಲ್ಲಿರೋ ಗೆಳೆಯನನ್ನು ರಾತ್ರಿಯ ಊಟದ ವೇಳೆಗೆ ಸಿಗಲು ಹೇಳಿ ಕೆಲಸ ಮುಂದುವರೆದಿತ್ತು..

ಎಂದಿನಂತೆ ಊಟಕ್ಕೆ ಕೂಪನ್ ಪಡೆಯಲು ಸಾಲಲ್ಲಿ ನಿಂತಿದ್ದಾಗ ಅಲ್ಲೆಲ್ಲೋ ಮೂಲೆಯ ಟೇಬಲ್ಲೊಂದರ ಸುತ್ತ ಗುಂಪೊಂದು ಕಟ್ಟಿತ್ತು. ಊಟಕ್ಕೆ ಸಿಗಬೇಕಿದ್ದ ಗೆಳೆಯನೂ ಆ ಗುಂಪಿನಲ್ಲಿದ್ದರಿಂದ ಬಳಿ ಹೋದಾಗ, ಗುಂಪಿನ ಮಧ್ಯದಲ್ಲಿ ಇದ್ದದ್ದು ಅವಳೇ!! ಶುಭ್ರ ನಗುವಿನಿಂದ ಅರಳಿತ್ತು ಅವಳ ಮೊಗವು, ಮತ್ತು ಮುಂದಿದ್ದ ಕೇಕ್ ಮೇಲಿನ ದೀಪಗಳ ಕಮಲದ ಹೂವೂ..!!

ಅರೆರೇ ಇಂದು ಅವಳ ಹುಟ್ಟುಹಬ್ಬವೇ ಎಂದು ಖುಷಿ ಪಡುತ್ತಾ ನಿಂತಿದ್ದ ನನ್ನನು ಕಂಡ ಗೆಳೆಯನು ಬಳಿ ಬಂದು ” Sorry ಬ್ರೋ.. ನನ್ನ್ colleagueದು last working day ಇವತ್ತು, ಅದ್ಕೆ farewell ಮಾಡ್ತಿದ್ವಿ.. ನೀನು ಊಟ ಮಾಡ್ತಿರು, I ll join you in few minutes” ಅಂದಿದ್ದೇ ತಡ ಅವಳ ಕೈಲಿದ್ದ ಪ್ಲಾಸ್ಟಿಕ್ ಚಾಕು ಎದೆಗೆ ಇರಿದಂತಾಗಿತ್ತು. ಕಮಲದ ಹೂವಲ್ಲಿದ್ದ ದೀಪಗಳು ತಣ್ಣಗಾದವು ಅವನ ನಗುವಿನಂತೆ.. ಕ್ಷಣ ಮಾತ್ರದಲ್ಲೇ ಪೇಸ್ಟ್ರಿ ಕೇಕು ಚೂರು ಚೂರಾಗಿತ್ತು ಆಗಷ್ಟೇ ಶುರುವಾದ ಕನಸುಗಳಂತೆ..

ಕಲೆ ಹಾಕಿದ್ದ ಫೋನ್ ನಂಬರನ್ನು ಡಿಲೀಟಿಸಿ ಸಪ್ಪೆ ಮೋರೆ ಹಾಕಿ ದೂರದ ಟೇಬಲ್ ಹಿಡಿದು ಅರೆಬೆಂದ ಚಪಾತಿ ತಿಂದು ಮುಗಿಸಿ, ಮೂರು ದಿನಗಳಿಂದ ಡೆಸ್ಕ್ ಟಾಪ್ ನ ಮೂಲೆ ಹಿಡಿದಿದ್ದ report ನೆನಪಾಗಿ ಕ್ಯೂಬಿಕಲ್ ಕಡೆಗೆ ಹೆಜ್ಜೆ ಹಾಕಿದ್ದನು..

*********************

Advertisements

ನೆರಳು

ಚಿಮಣಿ ದೀಪದ ಬೆಳಕಿಗೆ
ಬೆರಳುಗಳ ಪರದೆಯನಿಟ್ಟು
ಗೋಡೆಯ ಮೇಲೆ ಕಂಡ
ನಾಯಿ ನವಿಲು ಜಿಂಕೆಗಳ ಬಾಲ್ಯದ ನೆರಳು..

ಭಾನುವಾರದ ನಸು ಸಂಜೆಯಲಿ
ಅಪ್ಪನ ಕೈ ಹಿಡಿದು ನಡೆವಾಗ
ದಾರಿಯುದ್ದಕ್ಕೂ ಜೊತೆಯಾದ
ಭರವಸೆಯ ನೆರಳು..

ಶಾಲೆಯಂಗಳದಿ ಕುಡಿಮೀಸೆಯ ತಿರುವಿ
ಒಳಗೊಳಗೆ ಖುಷಿಪಡುವುದ
ಕಿಟಕಿಯಿಂದ ಕಂಡು
ಪಕ್ಕನೆ ನಕ್ಕವಳ ಮೊದಲೊಲವ ನೆರಳು..

ಕಾಲೇಜಿನ ತರಗತಿಗಳ ತಪ್ಪಿಸಿ
ಕದ್ದು ಸಿನೆಮಾಗಳ ನೋಡುವಾಗ
ಟಾಕೀಸಿನ ಕತ್ತಲಲಿ ನಾ ಕಂಡ
ಕನಸುಗಳ ನೆರಳು..

ವೃತ್ತಿಯನರಸಿ ರಸ್ತೆ ರಸ್ತೆಗಳ ಅಲೆವಾಗ
ಬಿಸಿಲ ಜಳಪಿಗೆ ಮೈ ಮನ ಕುಗ್ಗಿದಾಗ
ಹತಾಶೆಯ ಕಂಬನಿಗೆ ಸಾಕ್ಷಿಯಾಗಿದ್ದು
ರಸ್ತೆ ಬದಿಯ ಮರದ ನೆರಳು..

ಮನದ ಕಗ್ಗತ್ತಲ ಹೆದ್ದಾರಿಯಲಿ
ಈಗೀಗ ತಿಳಿ ಬೆಳಕು ಸ್ಪರ್ಶಿಸಲು,
ಸದ್ದಿಲ್ಲದೇ ಜೊತೆಯಾಗಿದೆ
ಇವೆಲ್ಲ ನೆನಪುಗಳ ನೆರಳು..

ಎಡೆಬಿಡದೆ ಕಾಡಿದೆ, ಕಾಣದ ನೆರಳೊಂದು
ತೋರುತಲಿ ನನ್ನ ನನಗೇ,
ಒಮ್ಮೆ ಹಿರಿದಾಗಿ – ಒಮ್ಮೆ ಕಿರಿದಾಗಿ
ಅದುವೇ, ರೂಪವಿರದ ಅಂತರಾಳದ ತಿರುಳು!!

ಹೇಗಿದ್ದ ಊರು ಹೇಗಾಯಿತು!

ಪ್ರತಿ ವರ್ಷದಂತೆ, ಕಳೆದ ಮಹಾಲಯ ಅಮಾವಾಸ್ಯೆಯ ಹಬ್ಬಕ್ಕೆ ಊರಿಗೆ ಹೋಗಿದ್ದೆವು. ನನಗೆ ಚಿಕ್ಕಂದಿನಿಂದಲೂ ಈ ಹಬ್ಬವೆಂದರೆ ಅದೇನೋ ಉತ್ಸಾಹ. ಕಾರಣ ನಮ್ಮೂರಲ್ಲಿ ಗಣೇಶ ವಿಸರ್ಜನೆ ಮಾಡುವುದು ಮಹಾಲಯ ಆಮಾವಾಸ್ಯೆಯ ಮರುದಿನದಂದು. ಹಳ್ಳಿಯ ಮಟ್ಟಿಗೆ ಬಹಳ ವಿಜೃಂಭಣೆಯಿಂದಲೇ ಎಲ್ಲರೂ ಕುಣಿದು ಕುಪ್ಪಳಿಸಿ ಊರಿನ ಹಿಂದಿದ್ದ ಕೆರೆಯಲ್ಲಿ ಗಣೇಶ ಮೂರ್ತಿಯನ್ನು ಮುಳುಗಿಸುತ್ತಿದ್ದರು. ನಗರವಾಸಿಗಳಾಗಿದ್ದ ನಮಗೆ ಇವೆಲ್ಲಾ ವಿಭಿನ್ನವಾಗಿ, ರೋಚಕವೆನಿಸುತ್ತಿದ್ದವು.

ಅದ್ಯಾಕೋ ಇತ್ತೀಚಿನ ವರ್ಷಗಳಲ್ಲಿ ನಮ್ಮೂರಿನ ಈ ಹಬ್ಬಗಳ ಮೆರುಗೇ ಕಮ್ಮಿಯಾದಂತಿದೆ. ಆಗೆಲ್ಲಾ ಹಬ್ಬಗಳಲ್ಲಿ ನಮ್ಮನೆಯ ತುಂಬಾ ಕಾಲು ಕಾಲಿಗೆ ಸಿಗುವಷ್ಟು ಜನರಿದ್ದರು. ಈಗ ಒಂದು ತೋರಣ ಕಟ್ಟಲಿಕ್ಕೂ, ತೋಟದಿಂದ ನಾಲ್ಕು ಬಾಳೆ ಎಲೆಗಳನ್ನು ಕೊಯ್ದು ತರಲಿಕ್ಕೂ ನಮ್ಮಜ್ಜಿ ಎಲ್ಲರನ್ನೂ ಹಲ್ಲುಗಿಂಜಿ ಬೇಡುತ್ತಿರುತ್ತಾರೆ. ಎಂಬತ್ತರ ಆಸುಪಾಸಲ್ಲಿರೋ ನಮ್ಮ ಅಜ್ಜನಿಗೆ ಹಬ್ಬದ ಬಗ್ಗೆ ಇರೋ ಹುಮ್ಮಸ್ಸಲ್ಲಿ ಅರ್ಧದಷ್ಟೂ ನಮ್ಮನೆಯ Youth iconsಗೆ ಇಲ್ಲ. ಏನೋ ಹಬ್ಬ ಮಾಡಬೇಕಲ್ಲ ಮಾಡಿದರಾಯಿತು ಅನ್ನುವಂತೆ ತಮ್ಮದೇ ಗುಂಗಿನಲ್ಲಿ ಓಡಾಡುತ್ತಿರುತ್ತಾರೆ..

ನಾನು ಊರಿಗೆ ಹೋದಾಗಲೆಲ್ಲಾ ನನ್ನ ಎಲ್ಲ ಬಂಧುಗಳ ಮನೆಗೆ ಹೋಗಿ ಮಾತಾಡಿ ಬರೋ ಅಭ್ಯಾಸ. ಹಾಗೆಯೇ ಊರ ಒಳಗೆ ಒಂದು ಸುತ್ತು ಬರೋಣವೆಂದು ಹೊರಟೆ. ಊರ ತುಂಬೆಲ್ಲ ನನಗೆ ಕಂಡು ಬಂದದ್ದು ಫೋನ್ ಹಿಡಿದು ಅಲ್ಲಲ್ಲಿ ಕುಳಿತಿರೋ ಯುವಕರ ಗುಂಪುಗಳು‌. ಅಯ್ಯೋ ಈ ಮೊಬೈಲ್ ಗ್ರಹಣ ನಮ್ಮ ಹಳ್ಳಿ ಹೈಕ್ಳಿಗೂ ಹಿಡಿಯಿತೇ ಎಂದು ಸಣ್ಣದಾಗಿ ನಗುತ್ತಾ ಹಾಗೆಯೇ ಮುನ್ನಡೆದೆ. ಇಡೀ ಊರು ನೀರವ ಮೌನ ತಾಳಿ ತಪಸ್ಸಿಗೆ ಕುಳಿತಂತಿತ್ತು. ಸಂಬಂಧಿಕರ ಮನೆಯೊಬ್ಬರ ಒಳಗೆ ಹೋದರೆ ಟಿ.ವಿ ಯೊಂದು ಮನೆ ಮಂದಿಯನ್ನೆಲ್ಲ ತನ್ನ ಹಿಡಿತದಲ್ಲಿಟ್ಟಿತ್ತು‌. ಅವರೆಲ್ಲ ನನ್ನನ್ನೊಮ್ಮೆ ನೋಡಿ, ಕುಳಿತುಕೊಳ್ಳುವಂತೆ ಸನ್ನೆ ಮಾಡಿ ಮತ್ತೆ ಟಿವಿಯೊಂದಿಗಿನ ಸಂವಾದ ಮುಂದುವರೆಸಿದಂತಿತ್ತು‌. ಹೇಗಿದ್ದ ಊರು ಹೇಗಾಯಿತು..

ಶಾಲೆಯ ದಿನಗಳಲ್ಲಿ ಬೇಸಿಗೆ ರಜೆ ಬಂತೆಂದರೆ ಸಾಕು ನಮ್ಮೂರಿಗೆ ಓಡುತ್ತಿದ್ದೆವು. ಅಂದಿನ ದಿನಗಳಲ್ಲಿ ಇಡೀ ಊರಿಗೆ ಟಿ.ವಿ ಇದ್ದದ್ದು ನಮ್ಮೂರಿನ ಪಟೇಲರ ಮನೆಯಲಿ ಮಾತ್ರ.. ಅದೂ 15 ಇಂಚಿನ ಕಪ್ಪು ಬಿಳುಪು ಪರದೆಯ ಟಿವಿ. ವಿದ್ಯುತ್ ಪೂರೈಕೆಯಿದ್ದದ್ದು ಸಂಜೆ ಆರರ ಮೇಲೆಯೇ.. ಆಗ ಬರುತ್ತಿದ್ದ ಒಂದೆರಡು ಧಾರಾವಾಹಿಗಳನ್ನೋ , ರಸಮಂಜರಿ ಕಾರ್ಯಕ್ರಮವನ್ನೋ ನೋಡಲಿಕ್ಕೆ ಇಡೀ ಊರಿನ ಬಹುತೇಕ ಜನ ಆರು ಘಂಟೆಯಾಗುವುದರೊಳಗೆ ದನ ಕರುಗಳನ್ನು ದೊಡ್ಡಿಗೆ ಸೇರಿಸಿ, ಆತುರವಾಗಿಯೇ ಎಲ್ಲ ಕೆಲಸಗಳ ಮುಗಿಸಿ ಆ ಮನೆಯಲ್ಲಿ ಎಲ್ಲರೂ ಹಾಜರಾಗುತ್ತಿದ್ದರು. ಆ ಟಿವಿ ಯಜಮಾನನಿಗೋ ಒಂಥರಾ ಗರ್ವ. ನನ್ನ ಅಕ್ಕ ಅಣ್ಣಂದಿರೂ ಸಹ ಸಂಜೆಯಾಗುತ್ತಿದ್ದಂತೆಯೇ ಅಲ್ಲಿಗೆ ಓಡುತ್ತಿದ್ದರು, ಜೊತೆಗೆ ನಮ್ಮನ್ನೂ ಎಳೆದೊಯ್ಯುತ್ತಿದ್ದರು.‌ ಒಂದು ಮಿನಿ ಚಿತ್ರಮಂದಿರದಂತಿರುತ್ತಿತ್ತು ಆ ಮನೆ. ಊರಿನ ಜನರೆಲ್ಲ ಒಂದೆಡೆ ಸೇರಿ, ಅಜ್ಜಿಯಂದಿರು ಎಲೆ ಅಡಿಕೆ ಹಂಚಿಕೊಳ್ಳುತ್ತಾ, ಗಂಡಸರೆಲ್ಲ ಹೊಲದಲ್ಲಿ ಪಟ್ಟ ಕಷ್ಟಗಳನ್ನು ಹೇಳಿಕೊಳ್ಳುತ್ತಾ, ಚಿಕ್ಕ ಮಕ್ಕಳೆಲ್ಲ ಆಟವಾಡುತ್ತಾ ಟಿವಿ ಕಾರ್ಯಕ್ರಮಗಳ ಜೊತೆ ತಮ್ಮ ದಿನವನ್ನು ಕೊನೆಗೊಳಿಸುತ್ತಿದ್ದರು. ಎಲ್ಲರಲೂ ಇದ್ದ ಆ ಮುಗ್ದತೆ, ಆಪ್ತತೆ, ಸ್ನೇಹ ಸಂಬಂಧಗಳ ಧೃಡತೆಗಳು ನಮ್ಮ ನಗರ ಜೀವನದಲ್ಲಿ ನನಗೆ ಕಾಣಸಿಗದಿದ್ದ ಕಾರಣ ಈ ವಿಚಾರಗಳಿಗೆ ನಮ್ಮೂರು ನನಗೆ ಬಹಳ ಆಪ್ತವೆನಿಸ್ತಿತ್ತು..

ತಂತ್ರಙಾನದ ಹಾವಳಿ ನಗರಗಳ ಗಡಿ ದಾಟಿ ಹಳ್ಳಿಗಳಿಗೂ ಕಾಲಿಟ್ಟ ಮೇಲೆ ಕ್ರಮೇಣ ಅಲ್ಲಿನ ಜನತೆ, ಜೀವನ ಶೈಲಿಯೂ ಬದಲಾಗಿಹೋಗಿದೆ. ಅಲ್ಲಿ ಮನೆಗೊಂದು ಟಿ.ವಿ ಇದೆ ಆದರೆ ಮನಬಿಚ್ಚಿ ಮಾತನಾಡುವವರೇ ಇಲ್ಲ. ಮೊಬೈಲ್ ಫೋನ್ ವಿಚಾರ ವಿನಿಮಯಕ್ಕಿಂತ ಹೆಚ್ಚಾಗಿಯೇ ಬಳಕೆಯಾಗ್ತಿದೆ. ಬದಲಾವಣೆಯೇನೋ ಜಗದ ನಿಯಮವೇ.. ಹಳ್ಳಿಗಳ ಅಭಿವೃದ್ಧಿಯ ದೃಷ್ಟಿಯಲ್ಲಿ ಅದು ಒಳ್ಳೆಯದೇ.. ಆದರೆ ಬದಲಾವಣೆ ಜೀವನಶೈಲಿಗಳಿಗಷ್ಟೇ ಸೀಮಿತವಾಗದೇ ಸಂಬಂಧಗಳ ಮೌಲ್ಯದ ತೂಕದಲ್ಲಿ ಅಸಮತೋಲನ ಉಂಟಾಗಿರುವುದಂತೂ ನಿಜವೇ ಸರಿ. ಒಂಟಿಯಾಗಿದ್ದಾಗ ಬೇಸರ ಕಳೆಯಲು ಫೋನ್ ಬಳಸಲು ಶುರು ಮಾಡಿ ಕೊನೆಗೆ ಫೋನ್ ನಿಂದಲೇ ಮನುಷ್ಯ ಸಂಬಂಧಗಳಿಂದ ದೂರಾಗಿ ಒಂಟಿಯಾಗುತ್ತಿದ್ದಾನೆ ಅಲ್ವೇ? ನಗರಗಳಲ್ಲಿ ಈ ಮಾನವೀಯ ಮೌಲ್ಯಗಳಿಗೆ ಬೆಲೆಯೇ ಇಲ್ಲ ಬಿಡಿ.. ಆದರೆ ಹಳ್ಳಿಗಳಲ್ಲೂ ಇದೇ ರೀತಿಯಾದರೆ ಪಟ್ಟಣ-ಗ್ರಾಮಗಳ ನಡುವಿನ ಆ ವೈಚಾರಿಕ ಗೆರೆ ಅಳಿಸಿ ಹೋದಂತೆಯೇ‌.
ತಂತ್ರಙಾನಗಳ ಸರಿಯಾದ ಬಳಕೆಯನ್ನು ಅರಿತು, ಮತ್ತದೇ ಮುಗ್ದತೆ ಮರುಕಳಿಸಿದ ದಿನ ನಮ್ಮೂರಿನ ಹಬ್ಬಗಳಿಗೆ ಮತ್ತದೇ ಮೆರುಗು ಬರಬಹುದೋ ಏನೋ.. ಕಾದು ನೋಡಬೇಕು..

ಐ-ಟಿ ಪರದಾಟ

ಏನ್ರೀ ಜೀವನವಿದು ಸಾಕುಸಾಕಾಗಿದೆ,
ಐಟಿ ಬದುಕು ಬೇಡಾಗಿದೆ..

ಹಗಲ್ಯಾವ್ದು ಇರುಳ್ಯಾವ್ದು ಕಾಣುವುದು ಒಗಟಂತೆ,
ದಿನಕೊಂದು ಶಿಫ್ಟು, ಇವತ್ತು ಕ್ಯಾಬ್ ಕೂಡ ಲೇಟಂತೆ..
ಊಟ ಮಾಡಿದರೆ ಮಾಡ್ಬೇಕು ನಿದ್ದೆಯ ತ್ಯಾಗ,
ಕೂತಲ್ಲೆ ಕೂತು ಮೈ ಮನಸೆಲ್ಲಾ ರೋಗ..

ಕನಸಲೂ ಬರುವನು ಮ್ಯಾನೇಜರ್ ಗುಮ್ಮನಂತೆ,
ಪೀಡಿಸುವನು ಎಲ್ಲಿ ರಿಪೋರ್ಟು, ತೆರೆದೆಯಾ ಟಿಕೇಟು ಎಂಬಂತೆ..
ಕೊಲಬೇಕೆನಿಸಿದರೂ ಸುಮ್ಮನಿರಲೇಬೇಕು,
ಇಲ್ಲದಿದ್ರೆ ಈ ವರ್ಷವೂ ಬರದು ಹೈಕು..

ಸಾವಿರಾರು ಕನಸುಗಳ ಅಡಗಿಟ್ಟು ಮನದಿ,
ಕುಳಿತೆವು ಸುಮ್ಮನೆ ಕಂಪ್ಯೂಟರ್ ಎದುರು..
ನಿನ್ನೆ ಬಂದ ಸಂಬಳ ಮುಗಿದೋಯ್ತು ಭರದಿ
ಕಟ್ಟುವೆನು EMI ಎರಡಲ್ಲ ಮೂರು..

ಏನ್ರೀ ಜೀವನವಿದು ಸಾಕುಸಾಕಾಗಿದೆ,
ಐಟಿ ಬದುಕು ಬೇಡಾಗಿದೆ..

ಗಣೇಶ ಬಂದ..

ನೋಡು ನೋಡುತ್ತಲೇ ಗಣೇಶ ಹಬ್ಬವೂ ಬಂದೇಬಿಡ್ತು. ರಸ್ತೆ ಬದಿಯಲ್ಲಿ, ಲಾರಿ-ಟೆಂಪೋಗಳಲ್ಲಿ Colorful ಗಣಪತಿಯದ್ದೇ ದರ್ಬಾರು! ಆಳೆತ್ತರದ ಮೂರ್ತಿಗಳು ಇನ್ನು ಕೆಲವೇ ಘಂಟೆಗಳಲ್ಲಿ ಗಲ್ಲಿಗಲ್ಲಿಗಳಲ್ಲಿ ರಾರಾಜಿಸಲು ಅಣಿಯಾಗಿವೆ. ಇಲ್ಲಿಂದ ಒಂದು ತಿಂಗಳವರೆಗೆ ಗಂಡು ಮಕ್ಕಳದ್ದೇ ಹವಾ! ಈ ಬಾರಿಯ ಬೆಂಗಳೂರು ಗಣೇಶೋತ್ಸವಕ್ಕೆ ಖರ್ಚಾಗ್ತಿರೋದು ಸುಮಾರು ಇಪ್ಪತ್ತು ಕೋಟಿಯಂತೆ! ಅಬ್ಬಾ ಗಣೇಶನಿಗೂ ಒಳ್ಳೆಯ Demand ಬಂದಂಗಾಯ್ತು.

ಹತ್ತು ಹನ್ನೊಂದು ವರ್ಷಗಳಿರಬಹುದು ನಮಗೆ. ಗಣೇಶ ಹಬ್ಬ ಬಂತೆಂದರೆ ಸಾಕು, ಏರಿಯಾ ಹುಡುಗರೆಲ್ಲ ಸೇರಿ ಖಾಲಿ ಡಬ್ಬವೊಂದನ್ನ ಹಿಡಿದು ಮನೆ ಮನೆಗೆ ಹೋಗಿ “ಗಣೇಶ ಕೂರಿಸ್ತಿದೀವಿ, ಕಾಸ್ ಹಾಕಿ” ಅಂತ ಕೇಳ್ತಿದ್ವಿ. ಕೆಲವರು ಒಂದೆರಡು ರೂಪಾಯಿ ಹಾಕ್ತಿದ್ರು, ಕೆಲವರು ಗದರಿಸಿ ಓಡಿಸ್ತಿದ್ರು. ಕೊನೆಗೆ ಒಂದು ನೂರು ಇನ್ನೂರು ರೂಪಾಯಿಗಳು ಸೇರಿ ನಮ್ಮ ಗಣೇಶೋತ್ಸವಕ್ಕೆ ಚಾಲನೆ ನೀಡುತ್ತಿದ್ದೆವು. ಅವರಿವರ ಕಾಡಿ ಬೇಡಿ ಗಣೇಶ ಮೂರ್ತಿ ಇಡಲು ಚಿಕ್ಕ ಗುಡಿಸಲು ಸಿದ್ಧವಾಗ್ತಿತ್ತು. ಎಲ್ಲರೂ ಅಮ್ಮನ ಬೆನ್ನು ಬಿದ್ದು ಒಂದೊಂದು ಹಣ್ಣು , ತಿಂಡಿಗಳನ್ನು ತಂದು ಸೇರಿಸ್ತಾ ಇದ್ವಿ. ಅಪ್ಪನ ಕರೆದೊಯ್ದು ಪುಟ್ಟ ಗಣಪತಿ ತರುತ್ತಿದ್ವಿ. ಹಬ್ಬದ ದಿನ ಬೆಳಗ್ಗೆ ಮನೆ ಬಿಟ್ಟರೆ ಮತ್ತೆ ಮನೆ ಸೇರುತ್ತಿದ್ದದ್ದು ಸಂಜೆಯೇ. ನಮ್ಮ ಪೂಜೆಯೋ ಆ ವಿನಾಯಕನಿಗೆ ಪ್ರೀತಿ ! ಆಚಾರ ವಿಚಾರ ಶಿಸ್ತು ಸಂಪ್ರದಾಯ ಏನೂ ಅರಿಯದ ನಮಗೆ ಆ ವಯಸ್ಸಿನಲ್ಲಿ ಗಣೇಶ ಹಬ್ಬವೆಂದರೆ ಸಂಭ್ರಮವಷ್ಟೇ. ಭಯ ಭಕ್ತಿಗಳ ಬದಲಾಗಿ ಖುಷಿಯಿಂದ ಮಜಾ ಮಾಡ್ತಾ ಹಬ್ಬ ಆಚರಿಸ್ತಿದ್ವಿ.. ಬಹುಶಃ ಗಣಪನಿಗೂ ನಮ್ಮ ಮುಗ್ದತೆಯೇ ಹಿಡಿಸಿ ಕೋಪಿಸಿಕೊಳ್ಳದೆಯೇ ಆಶಿರ್ವದಿಸುತ್ತಿದ್ದನೋ ಏನೋ!!

ಗಣೇಶ ಹಬ್ಬವೆಂದರೆ ಒಂದು ವರ್ಣರಂಜಿತ ಸಂಭ್ರಮ, ಸಡಗರ. ಗಲ್ಲಿಗಲ್ಲಿಯಲ್ಲೂ competition ಮೇಲೆ ತರುವ ವೈವಿಧ್ಯಮಯ ವಿನ್ಯಾಸದ ಗಣಪತಿಗಳು, ಜೋರಾಗಿ ಮೊಳಗುತ್ತಿರುವ ಹಾಡುಗಳು, ಸಂಜೆಯಾದರೆ ಆರ್ಕೆಸ್ಟ್ರಾ, ಗಣೇಶ ವಿಸರ್ಜನೆಗೆ ಹೊರಟಾಗ ಆ ರಂಗು ರಂಗಿನ ಪಲ್ಲಕ್ಕಿಯ ಮೇಲೆ ಮೆರವಣಿಗೆ , ಪಟಾಕಿ, ತಮಟೆ, ನೃತ್ಯ.. ಒಟ್ಟಾರೆ ನಮ್ಮಲ್ಲಿರೋ ಉತ್ಸಾಹಗಳನ್ನ ಮತ್ತೊಮ್ಮೆ ಬಡಿದೆಬ್ಬಿಸಿದಂತಾಗುತ್ತೆ. ಕ್ರಮೇಣ ದೊಡ್ಡವರಾದಂತೆ, ಜೀವನದ ಒತ್ತಡಗಳಿಂದ ಇಂಥ ಚಿಕ್ಕ ಚಿಕ್ಕ ಸಂಭ್ರಮಗಳಿಂದ ದೂರ ಉಳಿಯುತ್ತಿದ್ದೇವೆ. ಹಬ್ಬವೆಂದರೆ it’s like any other day ಅಂತಂದುಕೊಂಡು ನಿತ್ಯ ಜೀವನದ ಶೈಲಿಗೆ ಒಗ್ಗಿಕೊಂಡುಬಿಟ್ಟಿದ್ದೇವೆ. ಎಷ್ಟೋ ಜನಕ್ಕೆ ಇಂದು ಹಬ್ಬವೆಂದೇ ನೆನಪಿಲ್ಲ. ಇನ್ನು ನನ್ನಂತೆ ಮನೆಯಿಂದ ದೂರವಿದ್ದರೆ ಮುಗಿಯಿತು, ಹಬ್ಬಗಳ ಗಾಳಿ ಗಂಧವೇ ಮರೆತಂತೆ. Time tableನಂತಿರೋ ಈ ಯಂತ್ರ ಮಾನವ ಜೀವನವನ್ನು ಬಿಟ್ಟು ವರ್ಷಕ್ಕೊಮ್ಮೆ ಬರೋ ಹಬ್ಬದ ದಿನವಾದರೂ ಬಾಲ್ಯವನ್ನು ಇಣುಕಿ ಬರುವಾಸೆ‌. ಆರ್ಕೆಸ್ಟ್ರಾ ನೋಡಲು ಮೊದಲ ಪಂಕ್ತಿಯಲ್ಲಿ ಸೀಟು ಹಿಡಿದು ಹಿಗ್ಗುವ ಆಸೆ. ಶಿಳ್ಳೆ ಹೊಡೆದು ಕುಣಿದು ಕುಪ್ಪಳಿಸಿ ಜೋರಾಗಿ ಜೈಕಾರ ಹಾಕಿ ಗಣೇಶನನ್ನು ನೀರಲ್ಲಿ ಬಿಡುವ ಆಸೆ.. ಮನಸಿನಾಳದಿ ಅಡಗಿ ಕುಳಿತಿರೋ ಮುಗ್ದತೆಯ ಹೊರತೆಗೆದು ನನಗಾಗಿ ಬದುಕುವಾಸೆ..

ಸರ್ವರಿಗೂ ಗಣೇಶ ಚತುರ್ಥಿಯ ಶುಭಾಷಯಗಳು!!!

ವೃತ್ತಿ – ಪ್ರವೃತ್ತಿ

ಹೆಚ್ಚು ಕಮ್ಮಿ ನಾವೆಲ್ರೂ ಹೀಗೇ, ಯಾವ್ದೋ ಒಂದ್ ಸಂಸ್ಥೆಗೆ ಜೀವಾ ತೇದು ಕೆಲ್ಸ ಮಾಡ್ತಾಯಿರೋದು ನಾಳೆ ಬದುಕಬೇಕಲ್ಲ ಅನ್ನೋ ಒಂದೇ ನೆಪಕ್ಕೆ. ಹೀಗನ್ಸಿದ್ದು ಈ ವಾರದ ಕೊನೇಲಿ ನಿವೃತ್ತರಾಗ್ತಿರೋ ನನ್ನ Senior most ಸಹೋದ್ಯೋಗಿಯೊಡನೆ ಅಪ್ತವಾದ ವಿಷಯಗಳ ಬಗ್ಗೆ ಮಾತನಾಡುತ್ತಾ ಇದ್ದಾಗ. ಅವರಿಗೆ ನಾನು ವಿಷ್ ಮಾಡಿದಾಗ ನನಗುತ್ತರವಾಗಿ ಅವರು ’Have fun at work!’ ಎಂದು ನಕ್ಕರು. ನಾನು ತಕ್ಷಣ TOFLE ಪ್ರಶ್ನೆಗಳ ಮಾದರಿಯಲ್ಲಿ What do/did you mean? ಎಂದು ಕೇಳೋಣವೆನ್ನಿಸಿದರೂ ಕೇಳದೇ ಸುಮ್ಮನಾದೆ. ಕೆಲ್ಸ ಹಾಗೂ ಸಹೋದ್ಯೋಗಿಗಳನ್ನು ಬಿಟ್ಟು ಹೋಗ್ತಿದ್ದೇನೆ ಅನ್ನೋ ದುಗುಡವಾಗ್ಲೀ ದುಮ್ಮಾನವಾಗ್ಲೀ ನನಗೇನೂ ಅವರ ಮುಖದ ಮೇಲೆ ಕಾಣ್ಲಿಲ್ಲ, ಮುಂದೆ ಅದೆಲ್ಲೆಲ್ಲೋ ಗಾಲ್ಫ್ ಆಡೋದಕ್ಕೆ ಹೋಗ್ತೀನಿ, ಹಾಗ್ ಮಾಡ್ತೀನಿ, ಹೀಗ್ ಮಾಡ್ತೀನಿ ಅನ್ನೋ ಹುರುಪು ಎದ್ದು ಕಾಣ್ತಿತ್ತು.

ಹೆಚ್ಚು ಜನ ಬೆಳಗ್ಗೆ ಎದ್ದ ಕೂಡ್ಲೆ ’ಓಹ್, ಇವತ್ತು ಕೆಲಸಕ್ಕೆ ಹೋಗ್ಬೇಕಲ್ಲ!’ ಎಂದು ಉಲ್ಲಸಿತರಾಗೇನೂ ಇರೋದಿಲ್ಲ (ನನ್ನ ಅನಿಸಿಕೆ). ಈ ಹಾಳಾದ್ ಕೆಲ್ಸಕ್ಕೆ ಹೋಗ್ಬೇಕಲ್ಲ ಅನ್ನೋರೂ ಇದಾರೆ ಅಂತನೂ ಗೊತ್ತು. ಹಾಗಾದ್ರೆ ಜನಗಳು ತಮ್ಮ ಬದುಕನ್ನು ರೂಢಿಸೋ ಕೆಲಸವನ್ನ, ತಮಗೆ ಅನ್ನ ನೀಡೋ ಅನ್ನದಾತರನ್ನ ಅಷ್ಟೊಂದಾಗಿ ದ್ವೇಷಿಸದೆ ಇದ್ರೂ ಮನಸ್ಸಿಟ್ಟು ಪ್ರೀತಿಸೋದಂತೂ ನನಗೆ ಮನವರಿಕೆ ಆಗ್ಲಿಲ್ಲ. ಶಾಲೆ-ಕಾಲೇಜುಗಳಲ್ಲಿರುವಾಗ ’ಹಾಗ್ ಆಗ್ತೀನಿ, ಹೀಗ್ ಆಗ್ತೀನಿ’ ಅನ್ನೋ ಕನಸುಗಳು ಎಲ್ರಿಗೂ ಇರುತ್ತೆ. ನಮ್ಮ ಆಫೀಸಿನಲ್ಲಿ ತೆರೆದ ಕಣ್ಣಿನ ಈಗಷ್ಟೇ ಕಾಲೇಜು ಮುಗಿಸಿ ಬಂದ ಇಂಟರ್ನುಗಳು, ಈಗಾಗಲೇ ತುಸು ನೆಲೆ ಊರಿದ ನಮ್ಮಂತಹವರ ಕೆಲಸದ ವಿವರಗಳನ್ನು ಅರಿಯುತ್ತಿದ್ದಂತೆ ಅವರ ದವಡೆ ಕೆಳಗೆ ಬೀಳೋದನ್ನು ನಾನೇ ನೋಡಿದ್ದೇನೆ. ಮೊದಮೊದಲು ಏನೂ ಗೊತ್ತಿರದೇ ಇದ್ರೂ, ಮಾಡೋಕ್ ಏನೂ ಹೆಚ್ಚ್ ಕೆಲ್ಸ ಇರ್ದಿದ್ರು ಎಂಟು ಘಂಟೆ ಕಾಲ ಖುರ್ಚಿಗೆ ತಮ್ಮನ್ನು ತಾವು ಗಂಟು ಹಾಕಿಕೊಳ್ಳೋ ಹೋರಾಟವನ್ನು ನೋಡಿ ನೋಡಿ ನಕ್ಕಿದ್ದೂ ಉಂಟು. ಹೊಸದಾಗಿ ಸೇರಿಕೊಂಡವರಿಗೆ ನನ್ನಂತಹವರು ದಿನಕ್ಕೆ ನಾಲ್ಕೈದು ಘಂಟೆಗಳ ಕಾಲ ಕಂಪ್ಯೂಟರ್ ಮುಂದೆ ಕೂರೋದನ್ನ ನೋಡೇ ಸುಸ್ತಾಗಿ ಹೋಗುವುದನ್ನು ಕಂಡಿದ್ದೇನೆ.

ಅಲ್ಲಿಂದ ಆರಂಭವಾದ ವೃತ್ತಿ ಜೀವನ ಎನ್ನುವ ಬದುಕು ನಿವೃತ್ತಿ ಹಂತ ತಲುಪುವವರೆಗೆ ಕೆಲವರಿಗೆ ಹಲವು ಕಂಪನಿಗಳ ಘಮಗಳನ್ನು ನೀಡಿದರೆ, ಇನ್ನು ಕೆಲವರಿಗೆ ಒಂದೇ ಕಂಪನಿಯ ಔತಣವಾಗುತ್ತದೆ. ಅಲ್ಲಿ ಪ್ರೊಮೋಷನ್ನು-ಡಿಮೋಷನ್ನುಗಳಂಥ ಮೊದಲಾದ ರಕ್ತದೊತ್ತಡ ಏರಿಸಿ-ಇಳಿಸುವ ಹಂತ ಬಂದು ಹೋದರೂ ಇರುವಲ್ಲಿಂದ ತಲೆ ಎತ್ತಿ ನೋಡುವುದು ಎಲ್ಲಿ ಹೋದರೂ ತಪ್ಪೋದಿಲ್ಲ. ಒಂದಲ್ಲ ಒಂದು ಚಾಲೆಂಜುಗಳನ್ನು ಹಿಡಿದು ಸಂಬಾಳಿಸೋದೇ ವೃತ್ತಿಯಾಗುತ್ತದೆ. ಇಂಜಿನಿಯರುಗಳಿಗೆ ಡಾಕ್ಟರು, ಡಾಕ್ಟರುಗಳಿಗೆ ಮತ್ತಿನ್ಯಾರೋ ಕೆಲಸ ಇಷ್ಟವಾಗುವಂತೆ ಮೇಲ್ನೋಟಕ್ಕೆ ಕಾಣುತ್ತದೆ, ಹೆಚ್ಚಿನವರು ’I love my job’ ಅಥವಾ ’I love what I do for a living’ ಎಂದು ಮನ ಬಿಚ್ಚಿ ಹೇಳಿದ್ದನ್ನು ನಾನು ಕೇಳಿಲ್ಲ.

Why do we have to work? ಅನ್ನೋ ಪ್ರಶ್ನೆ ಈ ಬ್ಲಾಗಿನ ಬರಹಕ್ಕಿಂತ ದೊಡ್ಡದು. ಆದರೆ ನಮ್ಮ ನಮ್ಮ ಕೆಲಸಗಳನ್ನೇಕೆ ನಾವು ಪ್ರೀತಿಯಿಂದ ನೋಡೋದಿಲ್ಲ ಅನ್ನೋದು ಈ ಹೊತ್ತಿನ ಪ್ರಶ್ನೆ. ನಾವೆಲ್ಲ ಒಂದಲ್ಲ ಒಂದು ಕೆಲಸವನ್ನು ಮಾಡೇ ಮಾಡುತ್ತೇವೆ – ಆದರೆ ಆ ಕೆಲಸಕ್ಕೆ ಪೂರಕವಾಗುವಂತಹ ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡಿದ್ದೇವೆಯೇ? ಎಲ್ಲೋ ಕಲಿತು ಬಂದ ವಿದ್ಯೆ, Skill ಗಳಿಂದ ಈಗಿರುವ ಕೆಲಸವನ್ನು ಗಳಿಸಿಕೊಂಡಿದ್ದಾಯಿತು, ಇನ್ನು ಇಲ್ಲಿಂದ ಮುಂದೆ ಹೋಗಲು ಅಥವಾ ಬೇರೆ ಕಡೆಗೆ ಹಾರಿಹೋಗಲು ಇನ್ಯಾವುದನ್ನಾದರೂ ಪ್ರಯೋಗಿಸಿದ್ದೇವೆಯೇ? ಪ್ರಯತ್ನಿಸಿದ್ದೇವೆಯೇ? ಸರಿ, ಒಂದು ಮುವತ್ತು ವರ್ಷಗಳ ನಂತರ ಕೆಲಸ ಮಾಡಿ ಮುಂದೆ ನಿವೃತ್ತರಾದ ಮೇಲೆ ಏನು ಮಾಡೋದು? ಅಷ್ಟೊಂದು ವರ್ಷಗಳು ಕೆಲಸ ಮಾಡುವುದೇ ಖಾಯಂ ಆದಾಗ ನಾವು ಮಾಡುವ ಹುದ್ದೆಯನ್ನೇಕೆ ಪ್ರೀತಿಸೋದಿಲ್ಲ ಅಥವಾ ನಾವು ಪ್ರೀತಿಸುವ ಹುದ್ದೆಯನ್ನೇಕೆ ಮಾಡುವುದಿಲ್ಲ? ಅಥವಾ ಕೆಲಸ ಹಾಗೂ ಕೆಲಸದ ಮೇಲಿನ ಪ್ರೇಮ ಇವರೆಡೂ ಒಂದಕ್ಕೊಂದು ಎಣ್ಣೆ-ನೀರಿನ ಸಂಬಂಧವನ್ನು ಪಡೆದುಕೊಂಡುಬಿಟ್ಟಿವೆಯೇ?

ಸೋಮವಾರ ಶುರು ಮಾಡೋ ಕೆಲಸದಂದು ಮುಂಬರುವ ಶುಕ್ರವಾರದ ನಿರೀಕ್ಷೆ ಇದ್ದು ’ಈ ಕೆಲಸವನ್ನು ಯಾರು ಮಾಡುತ್ತಾರಪ್ಪಾ’ ಎನ್ನೋ ನಿಟ್ಟುಸಿರು ಆಗಾಗ್ಗೆ ಬರುತ್ತಿದ್ದರೆ ಆ ಕೆಲಸದಲ್ಲಾಗಲೀ ಕಂಪನಿಯಲ್ಲಾಗಲೀ ಕೊರತೆ ಇರದೆ ಕೆಲಸಗಾರನ ಮನದಲ್ಲೇನಿದೆ ಎಂದು ಆಲೋಚಿಸಿಕೊಳ್ಳಬೇಕಾಗುತ್ತದೆ. ನಾನಂತೂ ನನ್ನ ಕೆಲಸವನ್ನು ಅನ್ನದಾತನೆಂಬಂತೆ ಗೌರವಿಸುತ್ತೇನೆ, ಇದೇ ಪ್ರಪಂಚದ ಮಹಾ ಕೆಲಸಗಳಲ್ಲೊಂದಲ್ಲದಿದ್ದರೂ ಸದ್ಯಕ್ಕೆ ನನಗೆ ಅನ್ನ-ನೀರು ಕೊಡುತ್ತದೆಯೆಲ್ಲ ಎನ್ನುವ ರೀತಿಯಿಂದಲಾದರೂ ನನಗೆ ಅದರ ಮೇಲೆ ಮೋಹವಿದೆ ಪ್ರೀತಿಯಿದೆ. ನನ್ನ ಗುರಿಗಳು ಸದಭಿರುಚಿಗಳು ಬೇರೆಯದೇ ಆದರೂ, ಒಮ್ಮೊಮ್ಮೆ ’ಇದು ಯಾವನಿಗೆ ಬೇಕು, ಈ ಹಾಳು ಕೆಲಸವನ್ನು ಮಾಡೋದೇ ನನ್ನ ಬದುಕೇ…’ ಎಂದು ಅನ್ನಿಸಿದ್ದರೂ ಈ ಕೆಲಸವನ್ನು ಹುಡುಕಿಕೊಂಡು ಬಂದಿದ್ದು ನಾನೇ ಹೊರತು ಆ ಕೆಲಸ ನನ್ನನ್ನಲ್ಲ ಎನ್ನುವ ಸಾಮಾನ್ಯ ತಿಳುವಳಿಕೆ ನನ್ನನ್ನು ಸುಮ್ಮನಿರಿಸಿದೆ. ಪ್ರತೀ ವೃತ್ತಿಗೂ ಪ್ರತಿ ರಂಗಕ್ಕೂ ಅದರದ್ದೇ ಆದ ತೂಕವಿದೆ. ವೃತ್ತಿ ಮನೆಯವರ ಸಂತೋಷಕ್ಕಾದರೆ ಪ್ರವೃತ್ತಿ ಮನಸಿನ ಖುಷಿಗೆ. ಒಟ್ಟಿನಲ್ಲಿ ಪ್ರತಿಯೊಬ್ಬರಿಗೂ ಮಾಡಲೊಂದು ಕೆಲಸ ಬೇಕು, ಅದರ ಜೊತೆ ಜೊತೆಗೇ Passionನ ಬೆನ್ನಟ್ಟಿದರೆ ಸಾಕು..

 

ಯಾಕಿನ್ನು ಅಪ್ಡೇಟ್ ಆಗಿಲ್ಲ?!!!

Note: Purely Sarcastic!!!

 

ವಾರಾಂತ್ಯದಲ್ಲಿ ಬೇಜಾರು ಕಳೆಯೋದಕ್ಕೆ ಈ ಊರಲ್ಲಿರೋದು ಮೂರು ಮಾಲ್ ಗಳು ಬಿಟ್ರೆ, ಪ್ರಶಾಂತವಾದ ಸಮುದ್ರ. ಜೊತೆಗೆ ಯಾರಾದ್ರೂ ಬರ್ತಾರ ಅಂತ ನಮ್ಮ ಕನ್ನಡದವನೇ ಆದ ಸಹೋದ್ಯೋಗಿಯೊಬ್ಬನ ಕೇಳಿದ್ರೆ ಫೋನು ಲಾಪ್ಟಾಪ್ ಬಿಟ್ಟು ಎದ್ದೇಳಂಗ್ ಕಾಣ್ಲಿಲ್ಲ ಆಸಾಮಿ. “Game of Thrones season 7 ಶುರುವಾಗಿದೆ, ನೋಡೋದ್ ಬಿಟ್ಟು ನೀನೇನು ಗುರು ಬೀಚ್ ಅಂತ ಮೂರೊತ್ತು ಅಲ್ಲೇ ಇರ್ತೀಯಾ.. ಯಾವಾಗ್ಲೂ ಆ ಕನ್ನಡ ಬುಕ್ ಗಳನ್ನ ಓದೋದ್ ಬಿಟ್ಟು ಈ ಸೀರಿಸ್ ನೋಡು, heavy adventurous ಆಗಿದೆ” ಅಂತ ಲಾಪ್ಟಾಪ್ ನೋಡುತ್ಲೇ ಹೇಳ್ದ.

***

ಈ ವೇಗಮಯ ಜೀವನದಲ್ಲಿ ಎಲ್ಲವೂ ಕಿರುತೆರೆಗಳಿಗೆ ಮಾತ್ರ ಸೀಮಿತವಾಗೋ ಹಾಗೆ ಕಾಣ್ತಿದೆ. ದೊಡ್ಡ ಸಿನಿಮಾ ಪರದೆ ಚಿಕ್ಕ ಟಿವಿಗೆ ಮೀಸಲಾಗೋಯ್ತು, ಈಗ ಅದರಿಂದ ಸಣ್ಣ ಮೊಬೈಲ್ ಫೋನಿನ ಮಟ್ಟಿಗೆ ಇಳಿದು ಹೋಯ್ತು. So, ಚಿಕ್ಕದಾಗಿರದೇ ಇರೋದು ಬ್ಯಾಡವೇ ಬ್ಯಾಡಾ…ಅನ್ನೋದು ಈ ಕಾಲದ ಘೋಷಣೆ.

ಎಲ್ರೂ ನೂರು ರೂಪಾಯಿ ಕೊಟ್ಟು ಸಿನಿಮಾ ನೋಡ್ತಾ ಇದ್ರೆ ಸಾಕಲ್ವ – ಅವೇ ಟೇಕು ರೀಟೇಕುಗಳು ಸ್ಪೆಷಲ್ ಎಫೆಕ್ಟ್‌ಗಳೆಲ್ಲ ಇರೋವಾಗ ಅದರ ಮುಂದೆ ಬಯಲು ಸೀಮೆಯಲ್ಲಿನ ನಾಟಕ ಯಾವ ಮೂಲೆಯ ಲೆಕ್ಕ. ಒಂದೂವರೆ ಘಂಟೇಲಿ ಹಾಲಿವುಡ್ ಸಿನಿಮಾಗಳು ನೋಡೋಕ್ ಸಿಗೋವಾಗ ಈ ಲಕ್ಷ ಖರ್ಚು ಮಾಡಿ ಫಾರಿನ್ ಟೂರ್ ಮಾಡೋ ಗೋಜಿಗೆ ಯಾಕೆ ಹೋಗ್ಬೇಕು ಅಲ್ವಾ..

ಇಡೀ ರಾಮಾಯಣನ ಮೂರು ಘಂಟೆ ಸಿನೆಮಾ ಹೇಳುತ್ತೆ, ಪಾಪ ಯಾಕೆ ಆ ಕುವೆಂಪುರವರು ರಾಮಕೃಷ್ಣಾಶ್ರಮದಲ್ಲಿ ಕೂತು ರಾಮಾಯಣ ದರ್ಶನಂ ಬರೀಬೇಕಿತ್ತು. ಅದೂ ಸಾಲ್ದೂ ಅಂತ ವೀರಪ್ಪ ಮೊಯಿಲಿ ಯಾಕೆ ತಮ್ಮದೇ ಆದ ಒಂದು ವರ್ಷನ್ನನ್ನ ಕುಟ್ಟಬೇಕಿತ್ತು. ಒಂದೇ ರಾಮಾಯ್ಣ ಅದನ್ನ ಹೇಳೋಕ್ ಹತ್ತಾರ್ ಭಾಷೇನಾದ್ರೂ ಯಾಕ್ ಬೇಕು, ಎಲ್ಲಾನು ಇಂಗ್ಲೀಷಿಗೆ ಟ್ರಾನ್ಸ್ಲೇಟ್ ಮಾಡಿದ್ರೆ ಆಯ್ತು, ಯಾಕಂದ್ರೆ ನಾವೆಲ್ಲ ಇಂಗ್ಲೀಷ್ನಲ್ಲೇ ಓದ್ತೀವಲ್ಲ! ಆ ನಾರಾಯಣಪ್ಪ ಯಾಕೆ ಕುಮಾರವ್ಯಾಸ ಭಾರತ ಬರೆದ, ಅದೂ ಸಾಲ್ದೂ ಅಂತ ಭೈರಪ್ಪನೋರು ಯಾಕೆ ತಮ್ಮ ಪರ್ವ ಕೊರೆದ್ರು? ಆ ಕಾರಂತ್ರು ನಲವತ್ತರ ಮೇಲೆ ಕಾದಂಬರಿ ಬರೆದ್ರಂತಲ್ಲ ಅದ್ರಿಂದ ಏನಾಯ್ತು?

ಯಾರೂ ಓದದ ಕೇಳದ ಕಂದಪದ್ಯಗಳು ಬೇಡವೇ ಬೇಡ. ರಗಳೆಗಳ ರಗಳೆ ಹಾಗೇ ಇರಲಿ. ಚಂಪೂ ಕಾವ್ಯ ಅಂತಂದ್ರೆ ಏನು? ಷಟ್ಪದಿ-ಗಿಟ್ಪದಿ ಅಷ್ಟೇ ಅಲ್ಲಲ್ಲೇ ಇರಲಿ‌. ದೊಡ್ಡ ನಾವೆಲ್ಲುಗಳನ್ನೆಲ್ಲ ಈ ಸರ್ತಿ ಛಳಿಗಾಲಕ್ಕೆ ಸುಟ್ಟು ಮೈ ಬೆಚ್ಚಗೆ ಮಾಡಿಕೊಳ್ಳೋಣ. ಜನಪದ ಗೀತೆ ಹಳ್ಳಿಯೋರ್ ಗಾಥೆ ನಮಗಲ್ಲಪ್ಪ.
‘ಹೊನ್ನ ಗಿಂಡಿಯ ಹಿಡಿದು ಕೈಯಲಿ…’ ಅಂದ್ರೆ ಏನ್ರಿ, ಈ ಚೆನ್ನೈ ನಲ್ಲಿ ಗಿಂಡಿ ಇದೆಯಲ್ಲ ಅದಾ? ಆ ಡಿವಿಜಿ ಅವರಿಗೆ ಏನಾಗಿತ್ತು, ಅಷ್ಟೊಂದಾ ಬರೆಯೋದಾ? ಲೈಫು ಅಂದ್ರೆ ಸಿಂಪಲ್ಲು ಅಂತ ಗೊತ್ತಿರಲಿಲ್ವ ಅವ್ರಿಗೆ?ವಚನಾ – ಯಾರಿಗ್ ಯಾರ್ ಕೊಡೋ ಭಾಷೇ ಅದೂ? ನಮ್ಮ ಸುತ್ತ ಮುತ್ತ ಇರೋ ಲೈಬ್ರರಿಗಳನ್ನೆಲ್ಲ ಸ್ಕ್ಯಾನ್ ಮಾಡಿ ಆನ್‌ಲೈನ್‌ಗೆ ಹಾಕಿ ನಾವು ಓದ್ತೀವಿ.

ನಾವೇನೂ ಓದೋದಿಲ್ಲ ಅನ್ನೋದು ನಮ್ ಫ್ಯಾಷನ್ನ್ ಸಾರ್. ನಮ್ಮ ಸರ್ವತೋಮುಖ ಬೆಳವಣಿಗೆಗೆ ನಮ್ ನಮ್ ಮೊಬೈಲು-ಕಂಪ್ಯೂಟರ್ ಸ್ಕ್ರೀನ್‌ಗಳೇ ಸಾಕು ಸಾರ್. ಎರಡೇ ಎರಡು ಸಾಲಲ್ಲಿ ಹೇಳದ ಕಥೆ ಅದೂ ಕಥೇನಾ?

ನಮ್ಮ ಭಟ್ರ ಶೈಲೀಲಿ ಒಂದ್ dialogue ಹೊಡಿತೀನಿ ಕೇಳಿ, “ಸಾಫ್ಟ್ ವೇರ್ ಮಂದಿ ಅದೀವಿ ನಾವು ಕನ್ನಡ ಸಿನಿಮಾ ನೋಡಲ್ಲ, ಕನ್ನಡ ಕಾನ್ಸರ್ಟ್ ಬ್ಯಾಡವೇ ಬ್ಯಾಡ. ನಾವ್ ಇತ್ಲಾಗ್ ಕನ್ನಡ ಪ್ರೊಗ್ರಾಮ್ ನೋಡಲ್ಲ, ಇಂಗ್ಲೀಷ್ ಕಾನ್ಸರ್ಟ್ ತಿಳಿಯಲ್ಲ.
ಹಗ್ಲೂ ರಾತ್ರೀ ದುಡ್ದೂ ದುಡ್ದೂ, Strainನಿಂದ ಸೊರಗಿರೋ ಭುಜಕ್ಕೆ ಅಮೃತಾಂಜನ್ ಸ್ಟ್ರಾಂಗ್ ಲೇಪಿಸ್ಕೊಂಡು,
ನಲವತ್ತ್ ಆಗೋಕ್ಕಿಂತ ಮುಂಚೆ Diabetes ತಗಲಾಡಿಸ್ಕೊಂಡ್
ನರನಾಡಿಗಳಲ್ಲೆಲ್ಲ ಕೊಬ್ಬು-ಕೊಲೆಸ್ಟ್ರಾಲ್ ಹೆಚ್ಚಿಸಿಕೊಂಡು
ನಮ್ಮೂರಿನ ದನಕಾಯೋ ಕೆಲಸ ಮಾಡೋರಿಗಿಂತ
ಐದೇ ಐದು ವರ್ಷ ಹೆಚ್ಗೆ ಬದುಕಿಬಿಟ್ರೆ ಸಾಕು ನೋಡಪ್ಪ”
ಹೆಂಗಿದೆ? ನಿಮ್ಮ್ ಕಾಮೆಂಟ್ ಹಾಕಿ, ಸಕತ್ತಾಗಿದೆ dialogue ಅಂತ ಬರೀರಿ. ನಿಮಗೆ ನಾನ್ ಕಾಮೆಂಟ್ ಹಾಕ್ತೀನಿ, ನನಗೆ ನೀವ್ ಹಾಕಿ. ಆನ್ಲೈನಲ್ಲಿ ನಮ್ಮ ಸಂಬಂಧ ಹಂಗೇ ಬೆಳೀಲಿ.

***

ನಿಮ್ಮ್ ಕಡೆ ಮಕ್ಳು ಕನ್ನಡದಲ್ಲೇ ಮಾತಾಡ್ತಾವಾ? ಎಲ್ರೂ ಅತ್ತಂಗೇ ಅಳ್ತಾವಾ ಅಥವಾ ಅದಕ್ಕೂ ಬೇರೆ version ಏನಾದ್ರೂ ಬಂದಿದೆಯಾ? ಕನ್ನಡ ಮಾಧ್ಯಮವೇ ಬ್ಯಾಡ ಅಂತ ಕೋರ್ಟುಗಳೇ ತೀರ್ಪು ಕೊಟ್ವಂತೆ? ಅಂದ ಹಾಗೆ ಪ್ರಪಂಚದ ಸಾವ್ರಾರು ಭಾಷೆ ಫೈಲುಗಳನ್ನೆಲ್ಲ ಡಿಲ್ಲೀಟ್ ಮಾಡಿ ಬಿಡಿ, ಇಂಗ್ಲೀಷ್ ಒಂದೇ ಸಾಕು. ಇನ್ನೂ ಈಗ್ತಾನೆ ಕಣ್ಣ್ ಬಿಟ್ಟು ನೋಡ್ತಾ ಇರೋ ಮಕ್ಕಳಿಗೆ ಲೋಕಲ್ ಸಿಲಬಸ್ ಬೇಡ ರೀ, ಸಿಬಿಎಸ್ಸಿ-ಐಸಿಎಸ್ಸಿ ಕೊಡ್ಸಿ. ದೊಡ್ಡ ಸ್ಕೂಲಲ್ಲಿ ಓದ್ಸಿ ದೊಡ್ಡ ಮನುಷ್ಯರಾಗ್ತಾರೆ. ಪಬ್ಲಿಕ್ ಸ್ಕೂಲ್ ಅಂತ ಹೆಸ್ರು ಇಟ್ಕೊಂಡಿರೋ ಪ್ರೈವೇಟ್ ಸ್ಕೂಲ್‌ಗಳೇ ಚೆಂದ. ವರ್ಷವಿಡೀ ಇರೋ ಉರಿಬಿಸಿಲಲ್ಲೂ ಮಕ್ಳು ಟೈ ಕಟ್ಟಿ blazer ಹಾಕ್ಲಿ, ಎಷ್ಟ್ ಚೆಂದ ಕಾಣ್ತಾರೆ ಗೊತ್ತಾ? ಅಮ್ಮ-ಅಪ್ಪ ಅನ್ನೋಕ್ ಮುಂಚೆ ಮಮ್ಮೀ-ಡ್ಯಾಡೀ ಅನ್ನಲಿ ಆಗ್ಲೇ ನಮಗೊಂದ್ ಘನತೆ. ಅಯ್ಯೋ ಎಲ್ಲಾದ್ರೂ ಮಕ್ಳು ಓಡಾಡೋದು ಉಂಟೇ, ಕೈ ಕಾಲ್ ಸವದು-ಗಿವದು ಹೋದ್ರೆ ಕಷ್ಟಾ – ಹೋಗ್ ಕಾರಲ್ಲೇ ಬಿಟ್ಟ್ ಬನ್ನಿ, ಏನು?‌.

ಅವನ ಆ ಮೂರು ಮಾತುಗಳು ಇಷ್ಟೆಲ್ಲಾ ಪ್ರಶ್ನೆಗಳನ್ನ ಒಳಗೊಂಡಿದ್ವಾ.. ಉಫ್$$$$!!!! ತಪ್ಪ್ ಮಾಡ್ಬಿಟ್ವಿ ಸಾರ್ ನಾವು, ಇನ್ನೊಂದ್ ಇಪ್ಪತ್ತೈದು ವರ್ಷ ಬಿಟ್ಟು ಹುಟ್ಟಬೇಕಿತ್ತು. ನಮ್ಮ್ ಜನರೇಷನ್ನಲ್ಲಿದ್ದಷ್ಟು ಟೆನ್ಷನ್ನ್ ಇವಾಗ ಎಲ್ಲಿದೆ ಹೇಳಿ. ಎಲ್ಲ ಬೆರಳ ತುದಿಗೆ ಸಿಗುತ್ತೆ, ಅಂಬಾನಿ ಸಾಹೇಬ್ರು Jio ಭಾಗ್ಯ ಬೇರೆ ಕೊಟ್ಟು ಜೀವನ ಸುಲಭ ಮಾಡಿದಾರೆ, ಆ ಯಪ್ಪನ ಹೊಟ್ಟೆ ತಣ್ಣಗಿರಲಿ..